ನ್ಯೂಸ್ ನಾಟೌಟ್: ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರತಿಭಾಶಾಲಿಗಳಾಗಿದ್ದು ಜೊತೆಗೆ ಇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ಅಗ್ರಗಣ್ಯ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವ ಡಾ. ಸುರೇಶ್ ಎಂ ಆಲೆಟ್ಟಿ ಹೇಳಿದರು.
ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಗುರುವಾರ (ಏಪ್ರಿಲ್ 17) ಆಯೋಜಿಸಿದ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಡಾ. ಸುರೇಶ್ ಎಂ ಆಲೆಟ್ಟಿ ಅವರು, ತಮ್ಮ ವಿದ್ಯಾಭ್ಯಾಸಧ ಅವಧಿಯಲ್ಲಿನ ಉಪನ್ಯಾಸಕರ ಪ್ರೇರಣೆಯಿಂದ ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಕಾಲೇಜು ದಿನಗಳನ್ನು ಸ್ಮರಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯದ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಎನ್‌ಸಿಸಿ, ಎನ್ಎಸ್ಎಸ್ ಘಟಕಗಳ ಸಾಧನೆಯನ್ನು ಕೊಂಡಾಡಿದರು. ಕೆವಿಜಿ ಕ್ಯಾಂಪಸ್ ನ ಮಾತೃ ಸಂಸ್ಥೆ ನೆಹರು ಮೆಮೋರಿಯಲ್ ಕಾಲೇಜು ಸ್ಥಾಪನೆಯಾದ ದಿನಗಳಲ್ಲಿ ಜೊತೆಗಿದ್ದ ಸಂದರ್ಭಗಳನ್ನು ನೆನಪಿಸಿಕೊಂಡರು. ಕಾಡು ಪ್ರದೇಶವಾಗಿದ್ದ ಈ ಭಾಗ ಶಿಕ್ಷಣ ಕಾಶಿಯಾಗಿ ಬದಲಾದ ಅಭಿವೃದ್ಧಿ ಬಗ್ಗೆ ವಿವರಿಸಿದರು.
ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಶ್ಮಿ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಧುರ ಎಂ ಆರ್, ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ, ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ ಹಾಗೂ ವಿದ್ಯಾರ್ಥಿ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಇತ್ತೀಚೆಗೆ ಎನ್.ಎಸ್.ಎಸ್ ನ ರಾಜ್ಯ ಮಟ್ಟದ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಪಡೆದುಕೊಂಡ ಉಪನ್ಯಾಸಕಿ ಚಿತ್ರಲೇಖ ಕೆ.ಎಸ್ ಅವರನ್ನು, ವಿದ್ಯಾರ್ಥಿ ಸಾಧಕರಾದ ಎನ್.ಸಿ.ಸಿ ಯಲ್ಲಿ ದೆಹಲಿಯ ಗಣರಾಜ್ಯೋತ್ಸವ ಪಥಸಂಚನದಲ್ಲಿ ಭಾಗವಹಿಸಿದ ಚೇತನ್, ಕೃಷ್ಣರಾಜ್ ಮತ್ತು ಚಲನ, ಹಾಗೆಯೇ ಎನ್ಎಸ್ಎಸ್ ನಲ್ಲಿ ಭಾಗವಹಿಸಿದ ಹರ್ಷಿತ್ ಕೆ ಎಲ್ ರವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ದತ್ತಿ ನಿಧಿ, ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಭಾಗವಹಿಸುವಿಕೆ, ಅತಿ ಹೆಚ್ಚು ಗ್ರಂಥಾಲಯ ಬಳಕೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ಹಮ್ಮಿಕೊಂಡ ವಿವಿಧ ಕ್ರೀಡಾ ಸ್ಪರ್ಧೆಗಳ ಬಹುಮಾನ, ವಿದ್ಯಾರ್ಥಿಗಳಲ್ಲಿ ಚಾಂಪಿಯನ್ ಆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ವಾರ್ಷಿಕೋತ್ಸವದ ಮುನ್ನಾ ದಿನ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ ಮೈಸೂರಿನ ಹಿರಿಯ ನ್ಯಾಯವಾದಿಯಾಗಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿ ವಿಶ್ವನಾಥ ದೇವಸ್ಯ, ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕ್ಯಾ ನಾಯ್ಕ ಬಿ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ ಕೆ.ಟಿ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರೀಲಯ ಪ್ರಾರ್ಥನಾ ಮತ್ತು ಅಭಿಜ್ಞಾ ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ನಾಯಕ ಆದಿತ್ಯ ಡಿ.ಕೆ ಸ್ವಾಗತಿಸಿದರು. ಉಪನಾಯಕಿ ಗಾನಶ್ರೀ ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಸೂರ್ಯದರ್ಶನ ಪಿ ಎ ವಂದಿಸಿದರು. ಕು. ಅನ್ವಯ ಮತ್ತು ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸಹಕರಿಸಿದರು.