ನ್ಯೂಸ್ ನಾಟೌಟ್ : ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರವು ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ರಾಜ್ಯ ಹಾಗೂ ಅಂತರ್‌ರಾಜ್ಯಗಳಲ್ಲಿ ಜನಮೆಚ್ಚುಗೆ ಗಳಿಸಿದ ವೇದ-ಯೋಗ-ಕಲಾ ಶಿಬಿರವಾಗಿ ಇದೀಗ ಇಪ್ಪತ್ತೈದನೇ ವರ್ಷದ ಸಂಭ್ರಮದಲ್ಲಿದೆ.ಈ ಹಿನ್ನಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಿಬಿರದ ಸಮಾರೋಪ ಸಮಾರಂಭ ಹಾಗೂ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 18ರಂದು ಅಪರಾಹ್ನ 3 ಗಂಟೆಗೆ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪುರೋಹಿತ ನಾಗರಾಜ್ ಭಟ್ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರವು ಕಳೆದ 25 ವರ್ಷಗಳಿಂದ ಸಂಪೂರ್ಣ ಉಚಿತವಾಗಿ ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಸನ. ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ನಡೆಸಿಕೊಂಡು ಬರುತ್ತಿದೆ.
ಶಿಬಿರದ ವಿಶೇಷತೆ:
ಇಲ್ಲಿನ ವೇದ ಶಿಬಿರದ ವಿಶೇಷತೆಯೇನೆಂದರೆ ಇಲ್ಲಿ ಬರೇ ವೇದ ಪಾಠ ಮಾತ್ರವಲ್ಲದೆ ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ ಮುಂತಾದವುಗಳೂ ಅಲ್ಲದೆ ಇಂದಿನ ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ವೇದಗಣಿತ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ ರಂಗಕಲೆ, ರಂಗಪಾಠಗಳು. ರಂಗಗೀತೆ, ಚಿತ್ರಕಲೆ ಹೀಗೆ ಹಲವಾರು ವಿಷಯಗಳಲ್ಲಿ ರಾಜ್ಯದ ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಣ ನೀಡಲಾಗುತ್ತದೆ ಎಂದವರು ತಿಳಿಸಿದರು.
ಡಾ. ಗಿರಿಧರ ಕಜೆ ಅಧ್ಯಕ್ಷತೆ;
ಮೇ 18 ಭಾನುವಾರವಾರದಂದು ನಡೆಯಲಿರುವ ಸಮಾಪನಾ ಸಮಾರಂಭದಲ್ಲಿ ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ಮಾಡಲಿದ್ದಾರೆ. ಬೆಂಗಳೂರಿನ ಖ್ಯಾತ ಆರ್ಯುವೇದ ವೈದ್ಯ ಡಾ. ಗಿರಿಧರ ಕಜೆಯವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಗಣ್ಯರಿಗೆ ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ. ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣವನ್ನು ಬೆಳಾಲು ಧ.ಮಂ.ಕಾಲೇಜಿನ ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಮಾಡಲಿದ್ದಾರೆ. ಸುಳ್ಯ ಶಿವಕೃಪಾ ಕಲಾಮಂದಿರದ ಮಾಲಕ ಶ್ರೀ ಹರೀಶ್ ಕುಮಾರ್ ಕೆ. ಇವರು ಮುಖ್ಯ ಅಭ್ಯಾಗತರಾಗಿ ಶುಭಾಶಂಸನೆ ಮಾಡಲಿದ್ದಾರೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ ಎಂದು ಹೇಳಿದರು.
ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ:
ಅರಂಬೂರು ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ವೇದ ಅಧ್ಯಾಪಕರಾದ ಬ್ರಹ್ಮ ಶ್ರೀ ವೇ.ಮೂ. ವೆಂಕಟೇಶ ಶಾಸ್ತ್ರಿಗಳಿಗೆ ,ಗ್ರೀನ್ ಹೀರೋ ಆಫ್ ಇಂಡಿಯಾ ಡಾ| ಆರ್.ಕೆ.ನಾಯರ್ ಅವರಿಗೆ ಮತ್ತು ಸಂಗೀತ ಶಿಕ್ಷಕರಾದ ಶ್ರೀ ವಿದ್ವಾನ್ ಕಾಂಚನ ಈಶ್ವರ ಭಟ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಗುರುಗಳಾದ ವೇ। ಮೂ| ಸುದರ್ಶನ್ ಭಟ್ ಉಜಿರೆ, ಹಿರಿಯ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಶ್ರೀ ಬಲರಾಮ ಭಟ್ ಶಿವನಿವಾಸ, ಶಿಬಿರದ ಪ್ರಬಂಧಕಿ ಕು| ಯಶಸ್ವಿ ಮುಂಡಕಜೆ ಉಪಸ್ಥಿತರಿದ್ದರು.