ನ್ಯೂಸ್ ನಾಟೌಟ್: ಶಾಲೆಗೆ ತೆರಳಿದ್ದ ವಿದ್ಯಾರ್ಥಿಯೋರ್ವನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ತೆವಳಕ್ಕರ ಬಾಲಕರ ಶಾಲೆಯಲ್ಲಿ ಗುರುವಾರ (ಜು. 17) ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು 8ನೇ ತರಗತಿಯಲ್ಲಿ ಓದುತ್ತಿದ್ದ ಮಿಥುನ್ (13 ) ಎಂದು ಗುರುತಿಸಲಾಗಿದೆ. ಶಾಲೆಯ ಪಕ್ಕದಲ್ಲಿ ಸೈಕಲ್ ನಿಲ್ಲಿಸಲು ಶೆಡ್ ವ್ಯವಸ್ಥೆ ಮಾಡಲಾಗಿದೆ. ಈ ಶೆಡ್ ಮೇಲೆ ಮಿಥುಲ್ ಚಪ್ಪಲಿ ಬಿದ್ದಿತ್ತು. ಈ ಚಪ್ಪಲಿ ತೆಗೆದುಕೊಳ್ಳಲು ಮಿಥುನ್ ಶೆಡ್ ಮೇಲೆ ಏರಿದ್ದ ಈ ವೇಳೆ ತ್ರೀ ಫೇಸ್ ವಿದ್ಯುತ್ ತಂತಿ ತಗುಲಿದೆ. ಕೂಡಲೇ ಶಾಲಾ ಸಿಬ್ಬಂದಿ ಮತ್ತು ಸಹಪಾಠಿಗಳು ಮಿಥುನ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇತ್ತ ಆಸ್ಪತ್ರೆ ಮುಂದೆ ಮಿಥುನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲೆಗೆ ರಜೆ ನೀಡಲಾಗಿದೆ ಎಂದು ವರದಿಯಾಗಿದೆ.
ವಿದ್ಯುತ್ ಶಾಕ್‌ನಿಂದ ವಿದ್ಯಾರ್ಥಿ ಮೃತಪಟ್ಟ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಘಟನೆ ತೀವ್ರ ದುಃಖದಾಯಕ. ತನಿಖೆ ನಡೆಸಿ ತುರ್ತು ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸೂಚಿಸಲಾಗಿದೆ. ಕೊಲ್ಲಂ ಜಿಲ್ಲಾ ಉನ್ನತ ಶಿಕ್ಷಣಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.