ನ್ಯೂಸ್ ನಾಟೌಟ್ : ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಧೋಳ ನಗರದಲ್ಲಿ ಫೆ.28ರಂದು ನಡೆದಿದ್ದು, ಮಾರ್ಚ್ 2ರಂದು ದೇಹ ಸಿಕ್ಕಿದೆ.
ತೇಜಸ್ವಿನಿ ದೊಡ್ಡಮನಿ (17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ತೇಜಸ್ವಿನಿ ದೊಡ್ಡಮನಿ ಮುಧೋಳ ನಗರದ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದಳು. ಫೆಬ್ರವರಿ 27 ರಂದು ರಸಾಯನಶಾಸ್ತ್ರ ವಿಷಯದ ವಾರ್ಷಿಕ ಪರೀಕ್ಷೆ ನಡೆಯಿತು. ಪರೀಕ್ಷೆಯಲ್ಲಿ ತೇಜಸ್ವಿನಿ ನಕಲು ಮಾಡುವುದನ್ನು ಕಂಡ ಕಾಲೇಜು ಸಿಬ್ಬಂದಿ ಪ್ರಶ್ನೆ ಮಾಡಿದರು.
ಈ ವಿಚಾರವನ್ನು ತೇಜಸ್ವಿನಿ ಮನೆಗೆ ತಿಳಿಸಿ ಪೋಷಕರನ್ನು ಕರೆಸಲು ಕಾಲೇಜಿನಿಂದ ಹೇಳಿದ್ದರು. ಬಳಿಕ, ಪೋಷಕರು ಫೆಬ್ರವರಿ 28 ರಂದು ಕಾಲೇಜಿಗೆ ಬಂದು, ನಕಲು ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು. ಆಗ ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮೆರಾ ದೃಶ್ಯ ತೋರಿಸಲು ಮುಂದಾದರು. ಅಲ್ಲದೇ, ಕಾಲೇಜು ಸಿಬ್ಬಂದಿ ಪೋಷಕರ ಸಮ್ಮುಖದಲ್ಲಿ ತೇಜಸ್ವಿನಿಗೆ ಬುದ್ದಿವಾದ ಹೇಳಿದ್ದಾರೆ.
ಮನನೊಂದ ವಿದ್ಯಾರ್ಥಿನಿ ತೇಜಸ್ವಿನಿ ಕಾಲೇಜಿನಿಂದ ಹೊರಗೆ ಓಡಿ ಹೋಗಿದ್ದಾಳೆ. ಎಷ್ಟೂ ಹುಡುಕಿದರೂ ತೇಜಸ್ವಿನಿ ಸಿಗಲಿಲ್ಲ. ಬಳಿಕ, ಪೋಷಕರು ಮುಧೋಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದರು. ರವಿವಾರ (ಮಾ.02) ಮಹಾರಾಣಿ ಕೆರೆಯಲ್ಲಿ ತೇಜಸ್ವಿನಿ ಶವವಾಗಿ ಪತ್ತೆಯಾಗಿದ್ದಾಳೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.