ಕರಾವಳಿಸುಳ್ಯ

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ನ್ಯೂಸ್ ನಾಟೌಟ್ :ಸುಳ್ಯ ತಾಲೂಕಿನ ಬೆಳ್ಳಾರೆಯ  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿ ಎಚ್‌.ಬಿ. ಪ್ರಭಾಕರ್‌ ಶಾಸ್ತ್ರಿ, ನ್ಯಾ.ಅನಿಲ್‌ ಕೆ.ಕಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರವೀಣ್‌ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿ ಸಂಚಿನಲ್ಲಿ‌ ಆರೋಪಿಗಳು ಭಾಗಿಯಾದ ಆರೋಪವಿದೆ ಹೀಗಾಗಿ ಕೆ.ಇಸ್ಮಾಯಿಲ್‌ ಶಫಿ, (ಆರೋಪಿ 9), ಕೆ.ಮೊಹಮ್ಮದ್‌ ಇಕ್ಬಾಲ್‌ (ಆರೋಪಿ 10) ಹಾಗೂ ಎಂ.ಶಾಹೀದ್‌ (ಆರೋಪಿ 11) ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್‌ ಚಿಕನ್‌ ಫಾರ್ಮ್‌ ಶಾಪ್‌ ಹೊಂದಿದ್ದರು. 2022ರ ಜು.26ರಂದು ರಾತ್ರಿ ಮನೆಗೆ ಮೋಟಾರು ವಾಹನದಲ್ಲಿ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ನೆಟ್ಟಾರು ತಲೆ ಮೇಲೆ ಹೊಡೆದು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯ ಉಸಿರು ಚೆಲ್ಲಿದರು.

ಈ ಘಟನೆ ಸಂಬಂಧ ಪ್ರವೀಣ್‌ ಸ್ನೇಹಿತ ಮಧುಕುಮಾರ್‌ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆ.3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆ.4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡು ತನಿಖೆ ವೇಳೆ ಮೇಲ್ಮನವಿದಾರ ಆರೋಪಿಗಳನ್ನು ಬಂಧಿಸಿದ್ದರು.

ಈ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ 49ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ (ಎನ್‌ಐಎ ವಿಶೇಷ ನ್ಯಾಯಾಲಯ) 2023ರ ಏ.29ರಂದು ಆದೇಶಿಸಿತು. ಇದರಿಂದ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆರೋಪಿಗಳ ವಿರುದ್ಧದ ಪ್ರಕರಣ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Related posts

ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿಯಿಂದ ಭರ್ಜರಿ ಎಡಿಜಿಪಿ ಭೇಟೆ

‘ಹಣಕ್ಕೆ ಆಸೆ ಪಟ್ಟು ಕೆಟ್ಟ ಪಾತ್ರ, ಸಿನಿಮಾಗಳನ್ನ ಮಾಡಿಬಿಟ್ಟೆ, ಈಗ ನಂಗೆ ಅಸಹ್ಯ ಆಗ್ತಿದೆ’ , ಮುಂಬೈಗೆ ಬಂದ ನಟಿಗೆ ಆಗಿದ್ದೇನು..? ಅನುಭವ ತೆರದಿಟ್ಟ ಖ್ಯಾತ ನಟಿ

ಮುಳುಗಿದ ಗೂನಡ್ಕ, ತತ್ತರಿಸಿದ ಸಂಪಾಜೆ-ಕಲ್ಲುಗುಂಡಿ