ಕರಾವಳಿ

ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಅರ್ಜಿ ಸಲ್ಲಿಸಿದ ತಂದೆ, ರಾಜ್ಯ ಸರ್ಕಾರ ಮತ್ತು ಸಿಬಿಐ ಕೋರ್ಟ್ ಗೆ ನೋಟಿಸ್ ಜಾರಿ

ನ್ಯೂಸ್ ನಾಟೌಟ್: 11 ವರ್ಷದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಭೀಕರವಾಗಿ ಅತ್ಯಾಚಾರಗೊಳಗಾಗಿ ಹತ್ಯೆಗೊಳಗಾಗಿದ್ದ ಸೌಜನ್ಯ ಎಂಬ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರು ತನಿಖೆ ಕೋರಿ ಆಕೆಯ ತಂದೆ ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ರಾಜ್ಯ ಸರ್ಕಾರ ಮತ್ತು ಸಿಬಿಐ ಕೋರ್ಟ್ ಗೆ ನೋಟಿಸ್ ಜಾರಿ ಮಾಡಲಾಗಿದೆ.

2012ರ ಅಕ್ಟೋಬರ್‌ 9ರಂದು ನಡೆದ ಈ ಘಟನೆಯಲ್ಲಿ ಆರೋಪಿ ಎಂದು ಬಂಧಿತನಾದ ಸಂತೋಷ್‌ ರಾವ್‌ಗೆ ಸಿಬಿಐ ಕ್ಲೀನ್ ಚಿಟ್ ನೀಡಲಾಗಿತ್ತು. ಹಾಗಿದ್ದರೆ ಕೊಲೆಗಾರ ಯಾರು ಎನ್ನುವ ಪ್ರಶ್ನೆ ಗಾಢವಾಗಿ ಕಾಡುತ್ತಿದ್ದು, ಅದನ್ನು ಪತ್ತೆ ಹಚ್ಚಲು ಮರು ತನಿಖೆಯಾಗಲಿ ಎಂಬ ಬೇಡಿಕೆ ಜೋರಾಗಿ ಕೇಳಿಬಂದಿತ್ತು. ಅದರಂತೆ ಯುವತಿ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ‌ ಸೌಜನ್ಯ ಅವರ ತಂದೆ ಚಂದಪ್ಪ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು, ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ, ಬೆಳ್ತಂಗಡಿ ಪೊಲೀಸ್‌ ಠಾಣಾಧಿಕಾರಿ ಮತ್ತು ಸಿಬಿಐಗೆ ಪೀಠವು ನೋಟಿಸ್ ಜಾರಿಗೊಳಿಸಿದೆ.

ಪ್ರಕರಣದಿಂದ ಆರೋಪಿ ಸಂತೋಷ್‌ ರಾವ್‌ ಅನ್ನು ಖುಲಾಸೆಗೊಳಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯು ಇದೇ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ಮೇಲ್ಮನವಿಯೊಂದಿಗೆ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿರುವ ಪೀಠವು ರೋಸ್ಟರ್ ಪ್ರಕಾರ ಸೂಕ್ತ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆಯುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.

Related posts

ಪಂಚಾಯತ್ ವಾಹನ ತಡೆದು ಮುತ್ತಿಗೆ ಹಾಕಿದ ಅಜ್ಜಾವರ ದಲಿತ ಕಾಲೊನಿ ಜನ..! ವಿಡಿಯೋ ವೀಕ್ಷಿಸಿ

ಪುತ್ತೂರು:ಹಿಂದೂ ಯುವತಿ ಜೊತೆ ಮಾತನಾಡಿದನೆಂದು ಆರೋಪಿಸಿ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ

ಸುಳ್ಯ: ಮೇಯಲು ಬಂದ ಆಡುಗಳನ್ನು ಕಟ್ಟಿ ಹಾಕಿದ ನಗರ ಪಂಚಾಯತ್..! ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಮಾಲೀಕರಿಗೆ ಖಡಕ್ ಸೂಚನೆ