ನ್ಯೂಸ್ ನಾಟೌಟ್: ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಹಲವು ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈ ನಡುವೆ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸೇರಿದಂತೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಬೇಕು ಎಂದು ಒತ್ತಾಯಿಸಿರುವ ಸೌಜನ್ಯಾ ಹೋರಾಟ ಸಮಿತಿ ಇದೇ 24ರಂದು ಉಜಿರೆ ಚಲೊ ಕಾರ್ಯಕ್ರಮ ಆಯೋಜಿಸಿದೆ ಎಂದು ಹೋರಾಟ ಸಮಿತಿಯ ಪ್ರಮುಖ ಕೆ.ದಿನೇಶ್ ಗಾಣಿಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಪದ್ಮಲತಾ, ಧರ್ಮಸ್ಥಳ ಕ್ಷೇತ್ರದ ವತಿಯಿಂದ ನಡೆಯುವ ಶಾಲೆಯ ಶಿಕ್ಷಕಿ ವೇದವಲ್ಲಿ, ಮಾವುತ ನಾರಾಯಣ ಮತ್ತು ಯಮುನಾ ಕೊಲೆ ಪ್ರಕರಣವನ್ನು ಈಗ ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಥವಾ ಬೇರೆ ತಂಡಕ್ಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ನಾಲ್ಕು ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಬೇಕು ಮತ್ತು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲ ಕೊಲೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸುವುದು ಮತ್ತು ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಬೆಂಬಲಿಸುವುದು ಉಜಿರೆ ಚಲೊದ ಉದ್ದೇಶ ಎಂದು ಅವರು ತಿಳಿಸಿದರು.
1983ರ ಸಂದರ್ಭ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸಾವುಗಳ ಬಗ್ಗೆ ಅಂದು ವಿಧಾಸಭೆಯಲ್ಲಿ ಚರ್ಚೆಯಾಗಿತ್ತು. 1986ರಲ್ಲಿ ವೇದವಲ್ಲಿ ಕೊಲೆಯಾಯಿತು. 1973ರಲ್ಲಿ ಪದ್ಮಲತಾ ಅತ್ಯಾಚಾರ ಮತ್ತು ಕೊಲೆಯಾಗಿತ್ತು. 2012ರಲ್ಲಿ ನಾರಾಯಣ ಮತ್ತು ಯಮುನಾ ಅವರ ಕೊಲೆಯಾಯಿತು. ಇದಾಗಿ 20 ದಿನಗಳಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಆಯಿತು. ಈ ಯಾವ ಪ್ರಕರಣಗಳಲ್ಲೂ ಆರೋಪಿಗಳ ಪತ್ತೆಯಾಗಲಿಲ್ಲ. 2002ರಿಂದ 2012ರ ವರೆಗೆ ಧರ್ಮಸ್ಥಳ ಮತ್ತು ಉಜಿರೆಯಲ್ಲಿ 452 ಅಸಹಜ ಸಾವು ಪ್ರಕರಣಗಳು ಆಗಿದ್ದವು. ಆದರೆ ಧರ್ಮಸ್ಥಳ ಗ್ರಾಮ ಪಂಚಾಯಿತಿಯವರು ಹೇಳಿರುವ ಶವಗಳ ಸಂಖ್ಯೆಗೂ ಪೊಲೀಸರು ದಾಖಲಿಸಿಕೊಂಡಿರುವ ಯುಡಿಆರ್ ದಾಖಲೆಗೂ ವ್ಯತ್ಯಾಸವಿದೆ. 1970ರಿಂದ ಇಲ್ಲಿಯವರೆಗೆ ನಡೆದಿರುವ ಕೊಲೆಗಳ ಆರೋಪಿಗಳು ಸಿಗಲೇ ಇಲ್ಲ ಎಂದು ಅವರು ದೂರಿದರು.
ಈ ಕುರಿತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗಿದೆ. ಈ ನಡುವೆ ಕೆಲವು ರಾಜಕಾರಣಿಗಳು ಮತ್ತು ಸಂಘಟನೆಗಳು ಶ್ರೀ ಕ್ಷೇತ್ರದ ಹೆಸರು ಹಾಳಾಗುತ್ತಿದೆ, ಹಿಂದೂ ಧರ್ಮಕ್ಕೆ ಚ್ಯುತಿಯಾಗುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯಾ ಕೊಲೆ ಆದಾಗ ಸುಮ್ಮನಿದ್ದವರು ಈಗ ಮಾತನಾಡುತ್ತಿದ್ದಾರೆ. ಬೆಳ್ತಂಗಡಿ ಶಾಸಕರಿಗೆ ಮುಸ್ಲಿಮರು ಹಿಂದುಗಳನ್ನು ಕೊಂದರೆ ಮಾತ್ರ ಕೊಲೆಯಾಗುತ್ತದೆ. ಉಳಿದ ಪ್ರಕರಣಗಳ ಬಗ್ಗೆ ಅವರು ಸುಮ್ಮನಿರುತ್ತಾರೆ. ಧರ್ಮಸ್ಥಳದ ಬಗ್ಗೆ ಪರವಾಗಿ ಅಥವಾ ವಿರುದ್ಧವಾಗಿ ಇಲ್ಲಸಲ್ಲದ ಆರೋಪ ಮಾಡುವ ಎಲ್ಲರ ಮೇಲೆಯೂ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ದಿನೇಶ್ ಆಗ್ರಹಿಸಿದರು. ಆದಿತ್ಯ, ಕಿರಣ್ ಮತ್ತು ಸಚಿನ್ ಪಾಲ್ಗೊಂಡಿದ್ದರು.