ನ್ಯೂಸ್ ನಾಟೌಟ್: 2023ರ ಡಿಸೆಂಬರ್ 13ರಂದು ನಡೆದಿದ್ದ ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಇಬ್ಬರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಇದ್ದ ದ್ವಿಸದಸ್ಯ ಪೀಠವು ನೀಲಂ ಆಜಾದ್, ಮಹೇಶ್ ಕುಮಾವತ್ ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳಿಗೆ ತಲಾ 50,000 ರೂ. ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಕರಣ ಮುಗಿಯುವವರೆಗೆ ದೆಹಲಿ ಬಿಟ್ಟು ಹೋಗದಂತೆ ಸೂಚಿಸಿರುವ ಕೋರ್ಟ್ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆಗೆ ಗೊತ್ತುಪಡಿಸಿದ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದೆ. ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ (ASJ) ಹರ್ದೀಪ್ ಕೌರ್ ಆಜಾದ್ ಜಾಮೀಜು ಅರ್ಜಿಯನ್ನು ತಿರಸ್ಕರಿಸಿದ್ದರು.
ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಕೋರ್ಟ್ ಮಾಸ್ಟರ್ ಮೈಂಡ್ ಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ಜಾಮೀನು ನಿರಾಕರಿಸಿದೆ. ಮೈಸೂರು ಮೂಲದ ಮನೋರಂಜನ್ ಅಂದಿನ ಸಂಸದ ಪ್ರತಾಪ್ ಸಿಂಹ ಅವರ ಮೂಲಕ ಪಾಸ್ ಪಡೆದು ಸಂಸತ್ ಪ್ರವೇಶಿಸಿದ್ದರು.
2023ರ ಡಿಸೆಂಬರ್ 13 ರಂದು ಸಂಸತ್ ಭವನದಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಕೆಲವು ವ್ಯಕ್ತಿಗಳು ಸದನಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಎಸೆದಿದ್ದರು. ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂಬ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಬಂದು ಸ್ಮೋಕ್ ಬಾಂಬ್ ಎಸೆದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ದೆಹಲಿ ಪೊಲೀಸರು ಮಾಸ್ಟರ್ ಮೈಂಡ್, ಲಲಿತ್ ಝಾ ಮತ್ತು ಸಹ-ಆರೋಪಿ ಮಹೇಶ್ ಕುಮಾವತ್ ಸೇರಿ ಕೆಲವು ಆರೋಪಿಗಳನ್ನ ಬಂಧಿಸಿದ್ದರು.