ನ್ಯೂಸ್ ನಾಟೌಟ್: ಕರ್ನಾಟಕ – ಕೇರಳ ಗಡಿ ಭಾಗದ ಮಕ್ಕಳು ರಾಜ್ಯದ ಕೋಲ್ಚಾರಿನ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ಒಟ್ಟಾರೆ 14 ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳನ್ನು ಊರವರು ಪೂರ್ಣ ಮನಸ್ಸಿನಿಂದ ಸ್ವಾಗತಿಸಿದರು.
ಬಂದಡ್ಕ ಹಾಗೂ ಪಾಲಾರಿನ 14 ಮಕ್ಕಳು ಶಾಲೆಗೆ ಸೇರಿದ ಹಿನ್ನೆಲೆಯಲ್ಲಿ ಆ ಮಕ್ಕಳನ್ನು ಶಾಲೆಗೆ ಖರೀದಿಸಿರುವ ಅಕ್ಷರವಾಹಿನಿ ವಾಹನ ಮೂಲಕ ಮನೆಗಳಿಗೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಬಂದಡ್ಕದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಲಾಯಿತು. ಎಲ್ಲರೂ ಸೇರಿ ವಾಹನಕ್ಕೆ ಹೂವಿನ ದಳಗಳ ಅರ್ಪಣೆ ಮಾಡಿದರು. ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸುದರ್ಶನ್ ಪಾತಿಕಲ್ಲು ಮುತುವರ್ಜಿ ವಹಿಸಿ ಶಾಲೆಗೆ ಈ ವಾಹನ ಬರುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರಾಗಿದ್ದಾರೆ.
ಶಾಲೆಗೆ 2024-25ರ ಸಾಲಿನಲ್ಲಿ ರಾಜ್ಯದ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಜೊತೆಗೆ 2,85,000 ನಗದು ಪುರಸ್ಕಾರ, ತಾಲೂಕಿನ ಅತ್ಯುತ್ತಮ ಎಸ್ ಡಿಎಂಸಿ ಹೊಂದಿರುವ ಶಾಲೆ ಎಂಬ ಗೌರವದ ಜೊತೆಗೆ 1,00,000 ಲಕ್ಷ ರೂ. ನಗದು ಪುರಸ್ಕಾರ ಲಭಿಸಿದೆ.
ಪಠ್ಯ ಹಾಗೂ ಪಠ್ಯೇತರ ವಿಚಾರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಅತ್ಯುತ್ತಮ ಗ್ರಂಥಾಲಯ,ಅತ್ಯುತ್ತಮ ಶಿಕ್ಷಕರು, ಸಮುದಾಯದ ಸಹಭಾಗಿತ್ವ, ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ಲಭ್ಯವಿದೆ.
18 ಮಕ್ಕಳನ್ನು ಶಾಲೆಗೆ ಕರೆತರುತ್ತಿರುವ ಶಿಕ್ಷಕಿ
ಶಾಲೆಗೆ ವಾಹನದ ಮೂಲಕ ಸುಮಾರು 18 ವಿದ್ಯಾರ್ಥಿಗಳನ್ನು ಶಿಕ್ಷಕಿ ಜಲಜಾಕ್ಷಿಯವರು ದೂರದ ಊರಿನಿಂದ ಕರೆದುಕೊಂಡು ಬರುತ್ತಿದ್ದಾರೆ. ಸರ್ಕಾರದ ಅನುದಾನ ಹೊರತುಪಡಿಸಿ ಸುಮಾರು 88 ಲಕ್ಷ ರೂ. ದಾನಿಗಳಿಂದ ಬಂದಿರುವ ಅನುದಾನದಿಂದ ಶಾಲೆಯ ಅಭಿವೃದ್ಧಿ ಕೆಲಸಗಳು ನಡೆದಿದೆ.
ಶಿಕ್ಷಕಿ ಜಲಜಾಕ್ಷಿ ಕೆ ಡಿ, ಎಸ್ ಡಿ ಯಂ ಸಿ ಉಪಾಧ್ಯಕ್ಷೆ ಲತಾ ಪಾಲಾರು ಗುಂಡ್ಯ, ಅನಿತಾ ಪಾಲಾರು ಗುಂಡ್ಯ, ವೇಣುಗೋಪಾಲ ಪಾಲಾರುಗುಂಡ್ಯ, ಮನೋಹರ ಪಾಲಾರುಗುಂಡ್ಯ, ಭವ್ಯ ಪಾಲಾರುಗುಂಡ್ಯ, ಹೇಮಲತಾ ಪಾಲಾರುಗುಂಡ್ಯ, ಲೀಲಾ ಕಕ್ಕೇಚಾಲು, ಸುನಿತಾ ಮಕ್ಕೆಟ್ಟಿ ಕಕ್ಕೇಚ್ಚಾಲು, ಪೂರ್ಣಿಮಾ ಪೇರಾಲು ಮೂಲೆ, ರವಿ ಪೇರಾಲುಮೂಲೆ,ವಂದನಾ ಮಕ್ಕೆಟ್ಟಿಕಕ್ಕೇಚ್ಚಾಲು, ಪ್ರವೀಣ್ ಕಕ್ಕೆಚಾಲು,ಯಶೋಧ ಕಕ್ಕೇಚ್ಚಾಲು ಮುಂತಾದವರು ಉಪಸ್ಥಿತರಿದ್ದರು.