ನ್ಯೂಸ್ ನಾಟೌಟ್ :ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ಅದು ವಿವಿಧ ದೋಷಗಳಿಂದ ಕೂಡಿದೆ ಎಂದು ಹೇಳಿದೆ.
ನಾವು ಎಲ್ಲವನ್ನೂ ಪರಿಗಣಿಸಿದ್ದೇವೆ. ಜಾಮೀನು ಮಂಜೂರು ಮತ್ತು ರದ್ದತಿ ಎರಡೂ ವಿಷಯದಲ್ಲಿ ಹೈಕೋರ್ಟ್ ಆದೇಶವು ಗಂಭೀರ ದೌರ್ಬಲ್ಯಗಳಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ, ಯಾಂತ್ರಿಕವಾಗಿ ತೀರ್ಪು ನೀಡಲಾಗಿದೆ. ಮೇಲಾಗಿ, ಹೈಕೋರ್ಟ್ ವಿಚಾರಣೆಯ ಪೂರ್ವ ಹಂತದಲ್ಲಿ ತೀರ್ಪು ನೀಡಲಾಗಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಕೂಡಿದೆ. ಆರೋಪಿ ಎಷ್ಟೇ ದೊಡ್ಡವರಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಜೈಲು ಸೂಪರಿಂಟೆಂಡ್ನನ್ನು ಸಸ್ಪೆಂಡ್ ಮಾಡಬೇಕಿತ್ತು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪೆಂದು ಸುಪ್ರೀಂಕೋರ್ಟ್ ಹೇಳಿದೆ. ತಕ್ಷಣವೇ ದರ್ಶನ್ ಹಾಗೂ ಇತರ ಆರೋಪಿಗಳನ್ನು ಜೈಲಿಗೆ ಕಳುಹಿಸಬೇಕೆಂದು ಆದೇಶ ಬಂದಿದೆ.
ಏನಿದು ಘಟನೆ?
ನಟಿ ಪವಿತ್ರಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 33 ವರ್ಷದ ರೇಣುಕಾಸ್ವಾಮಿ ಎಂಬ ದರ್ಶನ್ ಅಭಿಮಾನಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ಇತರ ಹಲವರ ಮೇಲಿದೆ.
ಕಳೆದ ವರ್ಷ ಜೂನ್ 8ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಶೆಡ್‌ನಲ್ಲಿ ಮೂರು ದಿನಗಳ ಕಾಲ ಬಂಧಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿ ಶವವನ್ನು ಚರಂಡಿಯಲ್ಲಿ ಎಸೆದು ಹೋಗಿದ್ದರು. ನಂತರ ಶವ ಸಿಕ್ಕಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದರು.
ರಾಜ್ಯ ಸರ್ಕಾರದ ಮನವಿಯ ಮೇರೆಗೆ ಜನವರಿ 24 ರಂದು ಸುಪ್ರೀಂ ಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಮತ್ತು ಪ್ರಕರಣದಲ್ಲಿ ಇತರರಿಗೆ ನೋಟಿಸ್ ಜಾರಿ ಮಾಡಿತ್ತು. ಇದರಿಂದ ದರ್ಶನ್ ಜೈಲು ಸೇರಬೇಕಾದ ಪರಿಸ್ಥಿತಿ ಬಂತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ್ದು, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮ ಎಂಬ ಸಂದೇಶ ಸಾರುತ್ತದೆ ಎಂದು ಸರ್ಕಾರಿ ಪರ ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜೈಲಿಗೆ ಶಿಫ್ಟ್?
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದಾದ ಬೆನ್ನಲ್ಲೇ ನ್ಯಾಯಾಲಯಕ್ಕೆ ಇಂದು (ಆ.14) ಸಂಜೆ ಶರಣಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಶರಣಾದರೆ ಮತ್ತೆ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಜಾಮೀನು ಮಂಜೂರಾಗುವ ತನಕ 63 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. ಅಕ್ಟೋಬರ್ 30 ರಂದು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಅದೇ ಜೈಲಿಗೆ ಅವರು ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.