ಕರಾವಳಿಸುಳ್ಯ

ಕೊನೆಗೂ ಸಂಪಾಜೆ ಹೊಳೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ಹವಾಮಾನ ಇಲಾಖೆ ನೀಡಿದ ಮಳೆ, ಗಾಳಿ ಆತಂಕದ ನಡುವೆಯೇ ಪೂರ್ಣಗೊಳ್ಳುವುದೇ ಹೂಳೆತ್ತುವ ಕೆಲಸ?

312

ನ್ಯೂಸ್ ನಾಟೌಟ್: ಕಳೆದ ವರ್ಷ ನಿರಂತರ ಪ್ರವಾಹಕ್ಕೆ ಸಿಲುಕಿ ನರಕ ಸದೃಶ್ಯವಾಗಿದ್ದ ಸಂಪಾಜೆ ಹೊಳೆಯ ಹೂಳು ಎತ್ತುವ ಕಾರ್ಯಕ್ಕೆ ಇಂದು (ಬುಧವಾರ) ಚಾಲನೆ ದೊರಕಿದೆ.

ಸತತ ವರದಿಗಳ ಮೂಲಕ ‘ನ್ಯೂಸ್ ನಾಟೌಟ್ ‘ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು. ಇದೀಗ ಸಮಸ್ಯೆಗೆ ಫುಲ್ ಸ್ಟಾಪ್ ಹಾಕುವುದಕ್ಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುವುದಕ್ಕೆ ಆರಂಭಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹೇಮಂತ್ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಪಾಜೆಯ ಚೌಕಿಯಿಂದ ಕಲ್ಲುಗುಂಡಿಯ ಕೂಲಿಶೆಡ್‌ ವರೆಗೆ ಹೂಳು ಎತ್ತುವ ಕೆಲಸ ಆಗಬೇಕಿದೆ. ಈ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುತ್ತಾರೆಯೇ? ಅಥವಾ ಗಡಿಬಿಡಿಯಲ್ಲಿ ಅಲ್ಲಲ್ಲಿ ತೇಪೆ ಹಚ್ಚಿ ಸರಕಾರಕ್ಕೆ ಲೆಕ್ಕ ಕೊಡುವ ಕೆಲಸ ಮಾಡುತ್ತಾರೆಯೇ ? ಅನ್ನುವುದನ್ನು ಕಾದು ನೋಡಬೇಕಿದೆ. ಒಂದು ಕಡೆಯಿಂದ ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಗಾಳಿ, ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಸತತ ಮಳೆ ಸುರಿದರೆ ನದಿಯಲ್ಲಿ ನೀರು ಹೆಚ್ಚಾದರೆ ಹೂಳೆತ್ತುವ ಕೆಲಸಕ್ಕೆ ಅಡಿಯಾಗುವ ಸಾಧ್ಯತೆ ಇದೆ.

ವಸ್ತು ಸ್ಥಿತಿ ವಿವರಿಸಿದ್ದ ‘ನ್ಯೂಸ್ ನಾಟೌಟ್’

ಮಾರ್ಚ್ 8 , 2023 ರಂದು ಮೊದಲ ವರದಿಯನ್ನು ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟಿಸಿತ್ತು. ಇದಾದ ಬಳಿಕ ಮಾರ್ಚ್ 10, 2023 ರಂದು ಎರಡನೇ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಜನರ ಸಮಸ್ಯೆಯನ್ನು ವಿವರಿಸುವ ಪ್ರಯತ್ನ ನಡೆಸಲಾಗಿತ್ತು. ಸಂಕಷ್ಟಕ್ಕೆ ತುತ್ತಾಗಿದ್ದ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಆ ಬಳಿಕ ಊರಿನಿಂದಲೂ ಒಂದು ಹೋರಾಟ ಸಮಿತಿ ರಚನೆಯಾಗಿತ್ತು. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗೆ ನಿರಂತರ ಓಡಾಟದ ಬಳಿಕ ಇದೀಗ ಎಲ್ಲ ಸಮಸ್ಯೆಗೆ ತೆರೆಬಿದ್ದಿದೆ.

ಕಳೆದ ವರ್ಷ ಸಂಪಾಜೆಯ ಜನ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರೂ ಈ ಸಲ ಹೂಳೆತ್ತುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ. ಹಲವು ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಗಣಿ ಇಲಾಖೆ ತುರ್ತಾಗಿ ನಿರ್ಧಾರ ತೆಗೆದುಕೊಳ್ಳದಿರುವುದಕ್ಕೆ , ಅಧಿಕಾರಿಗಳ ಉದಾಸೀನತೆಗೆ ಹೂಳೆತ್ತುವ ಕೆಲಸ ತಡವಾಗಿದೆ. ಇದೀಗ ಮಳೆ ಶುರುವಾಗುವ ಸಮಯದಲ್ಲಿ ಕೆಲಸವನ್ನು ಆರಂಭಿಸಿದ್ದು ಈ ಕೆಲಸ ಪೂರ್ಣಗೊಳ್ಳುವುದೇ ಅನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

See also  ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು: ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ-ಪ್ರೋತ್ಸಾಹ ಧನ ವಿತರಿಸಿದ ರೇಣುಕಾ ಪ್ರಸಾದ್
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget