ನ್ಯೂಸ್ ನಾಟೌಟ್: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಇತ್ತೀಚೆಗೆ ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಗುಜರಾತ್ ನ ವಡೋದರ ಜಿಲ್ಲೆಯ ಹಳ್ಳಿಯೊಂದರಲ್ಲಿ ಪತ್ತೆ ಹಚ್ಚಲಾಗಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ಮಂಗಳವಾರ(ಎ.15) ಪೊಲೀಸರು ತಿಳಿಸಿದ್ದಾರೆ.
ಮುಂಬೈ ಸಂಚಾರಿ ಪೊಲೀಸರ ಕಚೇರಿಯ ವಾಟ್ಸ್ ಆ್ಯಪ್ ಸಂಖ್ಯೆಗೆ ರವಾನೆಯಾಗಿದ್ದ ಸಂದೇಶದಲ್ಲಿ ಸಲ್ಮಾನ್ ಖಾನ್ ರ ಕಾರು ಸ್ಫೋಟಿಸಲಾಗುವುದು ಹಾಗೂ ಬಾಂದ್ರಾದಲ್ಲಿನ ಅವರ ನಿವಾಸಕ್ಕೆ ನುಗ್ಗಿ ಅವರನ್ನು ಥಳಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈನ ವೊರ್ಲಿ ಪೊಲೀಸರು, ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದೆದುರಿನ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದರು.
ಈ ಕುರಿತು ತನಿಖೆ ಕೈಗೆತ್ತಿಕೊಂಡ ಮುಂಬೈ ಪೊಲೀಸರು, ವಡೋದರದ ವಾಘೋಡಿಯಾ ತಾಲೂಕಿನ ವ್ಯಕ್ತಿಯೊಬ್ಬ ಈ ಬೆದರಿಕೆ ಸಂದೇಶ ರವಾನಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಿಗೇ, ಸೋಮವಾರ ವಾಘೋಡಿಯಾ ಪೊಲೀಸರೊಂದಿಗೆ ಮುಂಬೈ ಪೊಲೀಸರು ಶಂಕಿತನ ನಿವಾಸಕ್ಕೆ ತೆರಳಿದ್ದರು.
ಆದರೆ, ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಸಂದೇಶ ರವಾನಿಸಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಂಕಿತ ಆರೋಪಿಗೆ ಮುಂಬೈ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಬೀಗ ಮುರಿದು ಸಾಯಿಬಾಬಾ ಮಂದಿರದಲ್ಲಿ ಕಳ್ಳತನ..! ಬೆಳ್ಳಿ ಪಾದಕೆ, ಕಿರೀಟ, ಛತ್ರಿ ನಾಪತ್ತೆ..!