ನ್ಯೂಸ್ ನಾಟೌಟ್: 1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅಪರಾಧಿ ಎಂದು ಸ್ಥಳೀಯ ಕೋರ್ಟ್ ತೀರ್ಪು ನೀಡಿತ್ತು. ಆ ಬಳಿಕ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ಪ್ರಕರಣದಿಂದ ದೋಷಮುಕ್ತವಾಗಿದ್ದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಂಗೆ ಮತ್ತೆ ಕಂಟಕ ಶುರುವಾಗುವ ಸೂಚನೆ ಸಿಕ್ಕಿದೆ. ಇವರನ್ನು ಪ್ರಕರಣದಿಂದ ಕೈ ಬಿಟ್ಟ ವಿಚಾರದಲ್ಲಿ ರಾಜಸ್ಥಾನ ಸರ್ಕಾರ ಹೈಕೋರ್ಟ್ ಮೊರೆ ಹೋಗಿದೆ.
1998ರ ಅಕ್ಟೋಬರ್ನಲ್ಲಿ ಸಲ್ಮಾನ್ ಖಾನ್, ಸೈಫ್, ತಬು, ಸೋನಾಲಿ ಬೇಂದ್ರ ಮೊದಲಾದವರು ‘ಹಮ್ ಸಾತ್ ಸಾತ್ ಹೇ’ ಚಿತ್ರೀಕರಣದ ಶೂಟ್ ಗೆ ಜೋಧ್ಪುರ್ ಸಮೀಪದ ಗ್ರಾಮ ಒಂದಕ್ಕೆ ತೆರಳಿದ್ದರು. ಶೂಟ್ ಪೂರ್ಣಗೊಂಡ ಬಳಿಕ ಸಲ್ಮಾನ್ ರಾತ್ರಿ ಬೇಟೆಗೆ ತೆರಳಿ ಕೃಷ್ಣಮೃಗ ಹತ್ಯೆ ಮಾಡಿದ್ದರು. ಈ ವೇಳೆ ಸಹಕಲಾವಿದರು ಜೊತೆಗಿದ್ದವರೂ ಸಾತ್ ನೀಡಿದ ಆರೋಪ ಇದೆ. ಈ ಪ್ರಕರಣದ ವಿಚಾರಣೆ ಬರೋಬ್ಬರಿ 20 ವರ್ಷಗಳ ಕಾಲ ನಡೆಯಿತು ಮತ್ತು 2018ರಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿತು.
ಈ ವೇಳೆ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಹಾಗೂ ನಿಲಂನ ನಿರಪರಾಧಿ ಎಂದು ಘೋಷಿಸಲಾಯಿತು. ಈಗ ರಾಜಸ್ಥಾನ ಸರ್ಕಾರವು ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ. ಈ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಗಾರ್ಗ್ ಜುಲೈ 28ಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಿದ್ದಾರೆ. ಇದಾದ ಬಳಿಕ ಈ ಕಲಾವಿದರ ಭವಿಷ್ಯ ನಿರ್ಧಾರ ಆಗಲಿದೆ.
1998ರಲ್ಲಿ ಸಲ್ಮಾನ್ ಖಾನ್ ಅವರು ಎರಡು ಕೃಷ್ಣಮೃಗ ಹತ್ಯೆ ಮಾಡಿದ್ದರು. ಕೃಷ್ಣಮೃಗವನ್ನು ದೇವರು ಎಂದು ಆರಾಧಿಸುವ ಬಿಷ್ನೋಯ್ ಸಮುದಾಯಕ್ಕೆ ಈ ಘಟನೆ ತೀವ್ರ ನೋವು ತಂದಿತ್ತು. ಹೀಗಾಗಿ, ಇದೇ ಸಮುದಾಯದವರು ಸಲ್ಮಾನ್ ಹಾಗೂ ಇತರರ ವಿರುದ್ಧ ದೂರು ದಾಖಲು ಮಾಡಿದ್ದರು.
ಮಡಿಕೇರಿ: ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಸಾವು..! ದೇವಾಲಯದ ಆವರಣದ ಬಳಿ ಘಟನೆ..!