ನ್ಯೂಸ್ ನಾಟೌಟ್: ಸೇತುವೆಯೊಂದು ಕುಸಿದು ರೈಲು ಹಳಿತಪ್ಪಿದ ಪರಿಣಾಮ ಏಳು ಮಂದಿ ಮೃತಪಟ್ಟು 30 ಕ್ಕೂ ಅಧಿಕ ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಕ್ರೇನ್‌ನ ಗಡಿಯಲ್ಲಿರುವ ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಭಾನುವಾರ (ಜೂನ್ 1) ಮುಂಜಾನೆ ಸಂಭವಿಸಿದೆ.
ಸಾರಿಗೆ ಕಾರ್ಯಾಚರಣೆಯಲ್ಲಿ ಅಕ್ರಮ ಹಸ್ತಕ್ಷೇಪದ ಪರಿಣಾಮ ರಸ್ತೆ ಸೇತುವೆಯ ಸ್ಪ್ಯಾನ್ ರಚನೆ ಕುಸಿದು ರೈಲಿನ ಲೋಕೋಮೋಟಿವ್ ಮತ್ತು ಹಲವಾರು ಬೋಗಿಗಳು ಹಳಿತಪ್ಪಿದವು ಎಂದು ರಷ್ಯಾದ ರೈಲ್ವೆ ತಿಳಿಸಿದೆ ಎಂದು ವರದಿಯಾಗಿದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬ್ರಿಯಾನ್ಸ್ಕ್ ಪ್ರದೇಶದ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಜ್ ಹೇಳಿದ್ದಾರೆ. ಮೃತಪಟ್ಟವರಲ್ಲಿ ಲೋಕೋವೋಟಿವ್ ಚಾಲಕರು ಸೇರಿದ್ದಾರೆ ಎಂದು ವರದಿ ಹೇಳಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ 180 ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ರಷ್ಯಾದ ತುರ್ತು ಪರಿಸ್ಥಿತಿಗಳ ಸಚಿವಾಲಯವು ಟೆಲಿಗ್ರಾಮ್‌ನಲ್ಲಿ ತಿಳಿಸಿದೆ. ರಷ್ಯಾದ ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ರೈಲು ಕ್ಲಿಮೊವೊ ಪಟ್ಟಣದಿಂದ ಮಾಸ್ಕೋಗೆ ಹೋಗುತ್ತಿತ್ತು. ಬ್ರಿಯಾನ್ಸ್ಕ್ ಪ್ರದೇಶದ ವೈಗೊನಿಚ್ಸ್ಕಿ ಜಿಲ್ಲೆಯ ಫೆಡರಲ್ ಹೆದ್ದಾರಿಯ ಪ್ರದೇಶದಲ್ಲಿ ಕುಸಿದ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.