ಕರಾವಳಿಪುತ್ತೂರುರಾಜಕೀಯ

ಮಂಗಳೂರು: ನಾಳೆ ದ.ಕ.ಜಿಲ್ಲಾ ವ್ಯಾಪ್ತಿಯ ಸಂಘ ಪರಿವಾರ ಸಂಘಟನೆಗಳ ಸಮನ್ವಯ ಬೈಠಕ್‌, ಲೋಕಸಭೆಗೆ ಅಭ್ಯರ್ಥಿ ಯಾರಾಗ್ತಾರೆ? ಬಿಜೆಪಿಯಿಂದ ಪುತ್ತಿಲ, ಬ್ರಿಜೇಶ್‌ ಚೌಟ, ನಳಿನ್‌ ಬಗ್ಗೆ ಚರ್ಚೆ ?

250

ನ್ಯೂಸ್‌ ನಾಟೌಟ್‌: ದ.ಕ.ಜಿಲ್ಲಾ ವ್ಯಾಪ್ತಿಯ ಸಂಘ ಪರಿವಾರ ಸಂಘಟನೆಗಳ ಸಮನ್ವಯ ಬೈಠಕ್‌ ಜೂ.26ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಲಿದೆ.

ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತಿದ್ದ ಬೈಠಕ್‌ ಕಳೆದು ವರ್ಷದಿಂದ ವಿವಿಧ ಕಾರಣಗಳಿಂದ ನಡೆದಿರಲಿಲ್ಲ. ಇದೀಗ ಕಾರ್ಯಕ್ರಮಕ್ಕೆ ದಿನ ನಿಗದಿಯಾಗಿದ್ದು, ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಾಮಾನ, ಸಂಘಟನೆಯ ಕಾರ್ಯಕರ್ತರಲ್ಲಿ ಅಸಮಾಧಾನ, ಸಂಘಟನೆಯಲ್ಲಿ ಒಡಕು, ಪುತ್ತೂರು ವಿಚಾರ ಚರ್ಚೆಗೆ ಬರಲಿದೆ. ಅಲ್ಲದೇ ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಿಂದ ಹಿಂದೂ ಸಂಘಟನೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಬೈಠಕ್‌ನಲ್ಲಿ ಆರ್‌ಎಸ್‌ಎಸ್‌ನ ಪ್ರಾಂತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಹಿತ ಬಿಜೆಪಿ ಹಾಗೂ ಸಂಘಪರಿವಾರದ 25ಕ್ಕೂ ಅಧಿಕ ಸಂಘಟನೆಗಳ 100ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯಿಂದ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹಪ್ರಭಾರಿ, ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಇತರ ಪರಿವಾರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಅಲ್ಲದೇ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬೈಠಕ್‌ ಹೆಚ್ಚು ಮಹತ್ವ ಪಡೆದಿದೆ.

ಬಿಜೆಪಿಯಿಂದ ದ.ಕ. ಜಿಲ್ಲೆಯಿಂದ ಮುಂದಿನ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ. ಬಿಜೆಪಿ ಮತ್ತು ಸಂಘಟನೆಗಳಲ್ಲಿ ಸಮನ್ವಯತೆ ಇಲ್ಲದೆ, ಕಾರ್ಯಕರ್ತರ ನಡುವೆ ಗೊಂದಲ, ಈ ನಿಟ್ಟಿನಲ್ಲಿ ಪಕ್ಷ ಕೈಗೊಳ್ಳಬೇಕಾದ ತೀರ್ಮಾನ, ಸಂಘಪರಿವಾರದ ಚಟುವಟಿಕೆಗಳು ಬೈಠಕ್‌ನಲ್ಲಿ ಚರ್ಚೆಯಾಗಲಿದೆ.

ಇತ್ತೀಚಿಗೆ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋಲನುಭವಿಸಿದ ಹಿಂದೂ ಮುಖಂಡ ಅರುಣ್‌ ಪುತ್ತಿಲ ಮುಂದಿನ ಲೋಕಸಭಾ ಅಭ್ಯರ್ಥಿಯಾಗಬೇಕು ಎಂದು ಹೆಚ್ಚಿನ ಕಾರ್ಯಕರ್ತರು ಜಿಲ್ಲೆಯಲ್ಲಿ ಅವರ ಪರ ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಅಭಿಯಾನ ಆರಂಭಿಸಿದ್ದು, ಇದು ಸಂಘ ಪರಿವಾರ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.ಇದರ ನಡುವೆ ಬಿಜೆಪಿಯಿಂದ ಈ ಬಾರಿ ಕ್ಯಾ.ಬ್ರಿಜೇಶ್‌ ಚೌಟ ದ.ಕ. ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅವರು ಸ್ವಯಂ ಆಗಿ ಪ್ರವಾಸ ಆರಂಭಿಸಿದ್ದು, ಇತ್ತ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೂಡ ನಾಲ್ಕನೇ ಬಾರಿ ಸ್ಪರ್ಧಿಸುವ ಉಮೇದಿನಲ್ಲಿ ಇದ್ದಾರೆ. ಈ ಎಲ್ಲಾ ವಿಚಾರಗಳು ಬೈಠಕ್‌ನಲ್ಲಿ ಚರ್ಚೆಗೆ ಬಂದು ಸಂಘಟನೆಯ ಹಿರಿಯರು ಗೊಂದಲವನ್ನು ನಿವಾರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

See also  ಓಮ್ನಿ ಕಾರು -ಪಲ್ಸರ್ ಬೈಕ್ ಅಪಘಾತ-ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಗೌಡ್ರು!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget