ನ್ಯೂಸ್ ನಾಟೌಟ್: ಪೆಟ್ರೋಲ್, ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ಖಂಡಿಸಿ ಲಾರಿ ಮಾಲಕರು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಲಾರಿ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ.
ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದ್ದು, ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಿಸಿದ್ದಾರೆ.
ಎ.15 ರಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತ್ಯೇಕವಾಗಿ ಎರಡು ಬಾರಿ ಸಭೆ ನಡೆಸಿದ್ದರೂ ಮಾತುಕತೆ ವಿಫಲವಾಗಿದ್ದರಿಂದ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಿತ್ತು.
ಈ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಮುಷ್ಕರ ನಿರತ ಲಾರಿ ಮಾಲಕರ ಸಂಘದ ಪದಾಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಲಾರಿ ಮಾಲಕರ ಪ್ರಮುಖ ಬೇಡಿಕೆಗಳನ್ನ ಕಾಲಮಿತಿಯಲ್ಲಿ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದರಿಂದ ಈ ಕ್ಷಣದಿಂದಲೇ ಮುಷ್ಕರ ಹಿಂಪಡೆಯುತ್ತಿರುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.