ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಅದು ಪುತ್ತೂರು ವಿಧಾನಸಭಾ ಕ್ಷೇತ್ರ. ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಸಮರ ಎಂದು ಹೇಳಲಾಗುತ್ತಿದೆಯಾದರೂ ಅರುಣ್ ಕುಮಾರ್ ಪುತ್ತಿಲ ಅಚ್ಚರಿಯ ಜಯ ಕಾಣುವ ನಿರೀಕ್ಷೆ ಇದೆ. ಸ್ವತಃ ಅಲ್ಲಿನ ಜನರೇ ಈಗ ಭವಿಷ್ಯ ನುಡಿಯುತ್ತಿದ್ದು ಪುತ್ತಿಲ ಅಭಿಮಾನಿಗಳಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ.
ಬ್ಯಾಟ್ ಹಿಡಿದು ಕ್ರೀಸ್ ಗೇಲ್ ರೀತಿಯಲ್ಲಿ ಅಬ್ಬರಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಈ ಸಲ ಗೆಲುವು ನಮ್ಮದೇ ಅನ್ನುವ ಮುನ್ಸೂಚನೆ ನೀಡಿದ್ದಾರೆ. ಹಿಂದುತ್ವದ ಅಸ್ತ್ರ ಹಿಡಿದು ಕಣಕ್ಕೆ ಇಳಿದ ಪುತ್ತಿಲ ಕಮಾಲ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆದು ನಿಂತಿರುವ ಅರುಣ್ ಪುತ್ತಿಲ ಹಿಂದುತ್ವದ ಹೆಸರಿನಲ್ಲಿ ಅತೀ ಹೆಚ್ಚು ಮತಗಳಿಸುವ ಸಾಧ್ಯತೆ ಇದೆ. ಇದಕ್ಕೆ ಇಂಬು ನೀಡುವಂತೆ ಮೊನ್ನೆ ನಡೆದಿರುವ ಅವರ ರೋಡ್ ಶೋನಲ್ಲಿ ಇಪ್ಪತ್ತೈದು ಸಾವಿರಕ್ಕೂ ಅಧಿಕ ಅಭಿಮಾನಿಗಳು, ಕಾರ್ಯಕರ್ತರು ನೆರೆದಿದ್ದಾರೆ. ಪುತ್ತಿಲಗೆ ಜಯಘೋಷ ಪುತ್ತೂರಿನ ರಸ್ತೆಯುದ್ದಕ್ಕೂ ಮಾರ್ಧನಿಸಿದ್ದನ್ನು ಜನ ಇನ್ನೂ ಮರೆತಿಲ್ಲ.
ಪುತ್ತಿಲ ಗೆದ್ದರೆ ಕಾರ್ಯಕರ್ತರೇ ಹೇಳುವ ಪ್ರಕಾರ ಹಿಂದುತ್ವ ಗೆಲ್ಲುತ್ತದೆ. ಪುತ್ತೂರಿನಿಂದ ಇಡೀ ಕರ್ನಾಟಕಕ್ಕೆ ಹಿಂದುತ್ವ ಕರಾವಳಿಯಲ್ಲಿ ಎಷ್ಟು ಗಟ್ಟಿಯಾಗಿದೆ ಅನ್ನುವ ಸಂದೇಶ ತಲುಪುತ್ತದೆ. ಹಿಂದೂ ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಬಿಜೆಪಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಈಗಾಗಲೇ ರಾಜ್ಯ ಬಿಜೆಪಿಯ ಅಧ್ಯಕ್ಷ ಹಾಗೂ ಹಾಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಹಲವಾರು ಕಾರ್ಯಕರ್ತರು ತೀವ್ರ ಅಸಮಾಧಾನ ಹೊಂದಿದ್ದಾರೆ. ಈ ಸೇಡನ್ನು ಪುತ್ತೂರಿನಲ್ಲಿ ಪುತ್ತಿಲ ಅವರನ್ನು ಗೆಲ್ಲಿಸುವ ಮೂಲಕ ತೀರಿಸಿಕೊಳ್ಳುವ ಸಾಧ್ಯತೆ ಇದೆ.
ಪುತ್ತೂರಿನಲ್ಲಿ ಬಹಳಷ್ಟು ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿರುವ ಬಿಜೆಪಿ ತನ್ನ ಹೊಂಡವನ್ನು ತಾನೇ ತೋಡಿಕೊಂಡಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಪುತ್ತೂರಿನಲ್ಲಿ ಸಾಕಷ್ಟು ಗೊಂದಲಗಳು ಕೂಡ ಇದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಮುಖ್ಯವಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ನಿರ್ಲಕ್ಷಿಸಿದ್ದೇ ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ ಎಂದೇ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಎಲ್ಲ ಅನುಮಾನ, ಪ್ರಶ್ನೆಗಳಿಗೆ ನಾಡಿದ್ದು ಉತ್ತರ ಸಿಗಲಿದೆ. ಗೆಲುವು ಯಾರದ್ದೂ ಅನ್ನುವ ಸಂಪೂರ್ಣ ಚಿತ್ರಣ ತೆರೆದುಕೊಳ್ಳಲಿದೆ.