ನ್ಯೂಸ್ ನಾಟೌಟ್: ಪುತ್ತೂರಿನ ಪ್ರೇಕ್ಷಣಿಯ ಸ್ಥಳ ಬೀರಮಲೆ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಅಪ್ರಾಪ್ತ ವಯಸ್ಕರಿಬ್ಬರನ್ನು ತಡೆದು ಅವರ ಫೋಟೋ, ವೀಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಲ್ಲಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಕಡಬ ತಾಲೂಕಿನ ಕುದ್ಮಾರು ನಿವಾಸಿ ಪುರುಷೋತ್ತಮ (43) ಮತ್ತು ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ರಾಮಚಂದ್ರ (38) ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬಾಲಕನ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದೂರಿನಲ್ಲಿ ವಿವರಿಸಿದಂತೆ ನನ್ನ ಪುತ್ರ ಆತನ ಪರಿಚಯದ ಬಾಲಕಿಯೊಂದಿಗೆ ಬೀರಮಲೆ ಬೆಟ್ಟದಲ್ಲಿ ಕುಳಿತುಕೊಂಡಿದ್ದಾಗ ಆರೋಪಿಗಳು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿದ್ದರು. ಅನ್ಯಧರ್ಮದವನೆಂದು ನಿಂದಿಸಿ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಕರೆದು ಅವಮಾನಿಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣವಾದ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹರಿಯ ಬಿಟ್ಟಿದ್ದಾರೆ. ನನ್ನ ಪುತ್ರನನ್ನು ಅನ್ಯಧರ್ಮದವ ಎಂದು ಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.