ಕರಾವಳಿಪುತ್ತೂರುಭಕ್ತಿಭಾವ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ವೈಭವದ ಜಾತ್ರಾ ಮಹೋತ್ಸವ, ಧ್ವಜಾರೋಹಣದೊಂದಿಗೆ ಚಾಲನೆ,ಹರಿದು ಬರುತ್ತಿರುವ ಭಕ್ತಸಾಗರ

163

ನ್ಯೂಸ್ ನಾಟೌಟ್ :ಇಂದಿನಿಂದ ಎ. 20 ರವರೆಗೆ ಪುತ್ತೂರಿನಲ್ಲಿ ಸಂಭ್ರಮವೋ ಸಂಭ್ರಮ.ಪುತ್ತೂರು ನಗರ ಭಾಗದಲ್ಲಂತು ಬಂಟಿಗ್ಸ್, ಕಲರ್ ಫುಲ್ ಅಲಂಕಾರ ರಾರಾಜಿಸುತ್ತಿದೆ. ಹೌದು, ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭಗೊಂಡಿದೆ.ಸಹಸ್ರಾರು ಸಂಖ್ಯೆಯ ಭಕ್ತರ ಆಗಮನಕ್ಕೆ ಜಾತ್ರೋತ್ಸವ ಸಾಕ್ಷಿಯಾಗಿದ್ದು,ಇಂದು ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಪುತ್ತೂರು ದೇಗುಲಕ್ಕೆ ಸಾವಿರಾರು ಭಕ್ತರು ಈಗಾಗಲೇ ಆಗಮಿಸಿದ್ದು,ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.ಇಂದು ಬೆಳಗ್ಗೆ ರವೀಶ್ ತಂತ್ರಿಯವರ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಕೊಡಿಯೇರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಾಸ್ತು ಶಿಲ್ಪಿಯಾದ ಜಗನಿವಾಸ ರಾವ್ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ,ಶಾಸಕ ಸಂಜೀವ ಮಠಂದೂರು,ಮಾಜಿ ಶಾಸಕಿ ಶಕುಂತಲಾ ಶೆಟ್ಟಿ,ಅರುಣಕುಮಾರ್ ಪುತ್ತಿಲ ಉಪಸ್ಥಿತರಿದ್ದರು.ಸಹಸ್ರ ಸಂಖ್ಯೆಯಲ್ಲಿ ಭಕ್ತಜನ ಸ್ತೋಮ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಯಿತು.

ಪುತ್ತೂರು ಮಹಾಲಿಂಗೇಶ್ವರ ಕೇವಲ ಪುತ್ತೂರಿಗೆ ಮಾತ್ರವಲ್ಲ ಹತ್ತೂರಿಗೂ ಒಡೆಯ. ‌ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಾಲಯವೆಂದರೆ ಅದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರವೆಂದೇ ಹೇಳಲಾಗುತ್ತಿದೆ. ಇಲ್ಲಿನ ಜನರ ದೈನಂದಿನ ದಿನಚರಿ ಮಹಾಲಿಂಗೇಶ್ವರನ ನಾಮ ಸ್ಮರಣೆಯಿಲ್ಲದೆ ಪ್ರಾರಂಭವಾಗುವುದಿಲ್ಲ ಮಾತ್ರವಲ್ಲ ಪುತ್ತೂರಿನ ಜನರು ಜಗತ್ತಿನಲ್ಲಿ ಎಲ್ಲೇ ಇರಲಿ, ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ. ಪುತ್ತೂರು ಸೀಮೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದೇವಸ್ಥಾನ ಸುಮಾರು 800ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ. ಈ ದೇವಸ್ಥಾನದ ಆಚರಣೆಗಳು, ಸಂಪ್ರದಾಯಗಳು ಕೂಡ ವಿಶಿಷ್ಟವಾದುದು.ಇಂತಹ ಇತಿಹಾಸ ಪ್ರಸಿದ್ಧ ದೇಗುಲದ ಜಾತ್ರಗೆಂದೇ ಊರ-ಪರವೂರ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಜಾತ್ರಾ ಮಹೋತ್ಸವದಲ್ಲಿ ಈ ಬಾರಿಯೂ ಅನ್ಯ ಧರ್ಮೀಯ ಸಂತೆ ವ್ಯಾಪಾರಕ್ಕೆ ನಿಷೇಧ ಹೇರಲಾಗಿದ್ದು,ನೂತನ ವಸ್ತ್ರ ಸಂಹಿತೆಯನ್ನು ಘೋಷಿಸಲಾಗಿದೆ. ಇದನ್ನ ಕಡ್ಡಾಯವಾಗಿ ಪಾಲಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿಯನ್ನು ಕೂಡ ಮಾಡಿಕೊಂಡಿದೆ.ಎಪ್ರಿಲ್‌ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಭೇಟಿ, ಎಪ್ರಿಲ್ 17 ರಂದು ಸಿಡಿಮದ್ದು ಪ್ರದರ್ಶನ ಹಾಗು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.

ಈ ಬಾರಿ ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ.ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವ ಭಕ್ತಾಧಿಗಳಿಗೆ ಮಾತ್ರ ವರುಣ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ದೇವರ ಬ್ರಹ್ಮರಥ ಎಳೆಯುವ ಸೇವಾಕರ್ತರಿಗೂ ವಸ್ತ್ರಸಂಹಿತೆ ಕಡ್ಡಾಯವಾಗಿದ್ದು,ಜಾತ್ರೆ ನಡೆಯುವ ಹತ್ತು ದಿನವೂ ಭಕ್ತಾದಿಗಳು ಸಾಂಪ್ರದಾಯಿಕ ಉಡುಗೆಯಲ್ಲೇ ದೇವಸ್ಥಾನಕ್ಕೆ ಬರಬೇಕೆನ್ನುವುದು ಸಮಿತಿಯ ಆಗ್ರಹವಾಗಿದೆ ಎಂದು ತಿಳಿಸಿದೆ.

See also  ಗೊಡಂಬಿ ಮೊಟ್ಟೆ ಇಟ್ಟ ನಾಟಿ ಕೋಳಿ, ವಿಚಿತ್ರ, ವಿಸ್ಮಯಕಾರಿ ಘಟನೆ
  Ad Widget   Ad Widget   Ad Widget   Ad Widget   Ad Widget   Ad Widget