ನ್ಯೂಸ್ ನಾಟೌಟ್: ಬದುಕಿದ್ದಾಗ ಜನರ ಪ್ರೀತಿಯನ್ನ ಸಂಪಾದಿಸಬೇಕೇ ವಿನಃ ದುಡ್ಡನಲ್ಲ..ಅಧಿಕಾರಿಯಾಗಿದ್ದಾಗ ಜನರ ಸೇವೆಗೆ ಮುಂದಾದ್ರೆ ಕೊನೆಗೆ ಜನರೇ ದೇವರಂತೆ ಹೊತ್ತು ಮೆರವಣಿಗೆ ಮಾಡಬಲ್ಲರು ಅನ್ನೋದಕ್ಕೆ ಈ ಒಂದು ಘಟನೆಯೇ ಸಾಕ್ಷಿಯಾಗಿದೆ.ಈ ದೃಶ್ಯವನ್ನು ನೋಡಿದ್ರೆ ಹಣ ಮನುಷ್ಯನಿಗೆ ಎಂದಿಗೂ ಶಾಶ್ವತವಲ್ಲ,ಜನ ತೋರಿಸುವ ಪ್ರೀತಿಗೆ ಬೆಲೆ ಕಟ್ಟಕ್ಕಾಗಲ್ಲ ಎಂಬ ಮಾತು ನೆನಪಿಗೆ ಬರುತ್ತೆ..
ಹೌದು, ಈ ಪೀಠಿಕೆ ಏಕೆಂದರೆ ಇಲ್ಲೊಬ್ಬರು ಪಿಡಿಒತನ್ನ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ರಹಿತವಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.ಕೊನೆಗೆ ಗ್ರಾಮಸ್ಥರೇ ಈ ಜನ ಮೆಚ್ಚಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತೆರೆದ ಜೀಪಿನಲ್ಲಿ ಬರೊಬ್ಬರಿ 11 ಕಿ.ಮೀ. ದೂರದ ಅವರ ಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಶಿಷ್ಟ ರೀತಿಯಲ್ಲಿ ಬೀಳ್ಕೊಟ್ಟ ಅಪರೂಪದ ಘಟನೆ ನಡೆದಿತ್ತು.ಈ ವಿಶಿಷ್ಟ ರೀತಿಯ ಗೌರವಕ್ಕೆ ಪಾತ್ರ ರಾದವರು ಪೆರುವಾಜೆ ಗ್ರಾಮದ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ಎಂಬವರು. ಮಾ. 29ರಂದು ಸೇವಾ ನಿವೃತ್ತಿಯ ಪ್ರಯುಕ್ತ ನಡೆದ ಬೀಳ್ಕೊಡುಗೆ ಎಲ್ಲರ ಗಮನ ಸೆಳೆದಿದ್ದು,ಭ್ರಷ್ಟಾಚಾರ ರಹಿತ ಸೇವೆಗಾಗಿ ಗ್ರಾಮಸ್ಥರು ತೋರಿದ ಅಕ್ಕರೆಯ ಪ್ರೀತಿಗೆ ಅಧಿಕಾರಿಯ ಕಣ್ಣಂಚಲ್ಲಿ ಆನಂದ ಬಾಷ್ಪವೇ ತುಂಬಿ ಬಂತು.
ಯಾರಿವರು ಅಧಿಕಾರಿ ?
1998ರಲ್ಲಿ ಎಣ್ಮೂರು ಮಂಡಲ ಪಂಚಾಯತ್ ನಲ್ಲಿ ಕಚೇರಿ ಗುಮಾಸ್ತರಾಗಿ ಸೇವೆ ಆರಂಭಿಸಿದ ಮುರುಳ್ಯ ಗ್ರಾಮದ ಅಲೆಕ್ಕಾಡಿ ನಿವಾಸಿ ಜಯಪ್ರಕಾಶ್ ಅವರು ಅನಂತರ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಗ್ರೇಡ್ 1 ಕಾರ್ಯದರ್ಶಿಯಾಗಿ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾ.ಪಂ.ನಲ್ಲಿ ಹಾಗೂ ಪ್ರಭಾರ ಕಾರ್ಯದಶಿಯಾಗಿ ಬೆಳಂದೂರು, ಬಿಳಿನೆಲೆ ಗ್ರಾ.ಪಂ.ನಲ್ಲಿ ಸೇವೆ ಸಲ್ಲಿಸಿ ಬಳಿಕ 2018ರಂದು ಪೆರುವಾಜೆ ಗ್ರಾ.ಪಂ. ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸಿದರು.ಇದೀಗ 2025 ಮಾ. 29ರಂದು ನಿವೃತ್ತಿ ಹೊಂದಿದ್ದಾರೆ.ತನ್ನ ಒಟ್ಟು ಸೇವಾವಧಿಯಲ್ಲಿ ಪ್ರಾಮಾಣಿಕ ಸೇವೆಯಿಂದ ಗುರುತಿಸಿಕೊಂಡು ತಾಲೂಕಿನಲ್ಲೇ ಲಂಚ ರಹಿತ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಇವರನ್ನು ಪೆರುವಾಜೆಯಿಂದ 11 ಕಿ.ಮೀ. ದೂರದಲ್ಲಿ ಇರುವ ಅವರ ಮನೆಗೆ ತೆರೆದ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದು, ಭಾರಿ ವಿಶೇಷವೆನಿಸಿತ್ತು.ಮಾತ್ರವಲ್ಲಇವರ ಸೇವಾ ನಿವೃತ್ತಿಯ ಪ್ರಯುಕ್ತ ನಡೆದ ಬೀಳ್ಕೊಡುಗೆಯಂದು ಎಲ್ಲರೂ ಕಣ್ಣೀರಾದರು.ಅಲಂಕರಿಸಿದ ಜೀಪಿನಲ್ಲಿ ಪಿಡಿಒ ಅವರನ್ನು ,ಗ್ರಾಮಸ್ಥರು ಹತ್ತಾರು ವಾಹನಗಳಲ್ಲಿ ಅವರನ್ನು ಹಿಂಬಾಲಿಸಿ ಕೊಂಡು ಮೆರವಣಿಗೆ ಮಾಡಿದರು. ಪೆರುವಾಜೆಯಿಂದ ಬೆಳ್ಳಾರೆಯ ಮುಖ್ಯ ರಸ್ತೆಯ ಮೂಲಕ ಸಾಗಿ ನಿಂತಿಕಲ್ಲು ಮಾರ್ಗವಾಗಿ ಮುರುಳ್ಯಕ್ಕೆ ತಲುಪಿ ಅಲ್ಲಿಂದ ಅಲೆಕ್ಕಾಡಿಯ ಅವರ ಮನೆಗೆ ಕರೆದುಕೊಂಡು ವಿಶೇಷ ರೀತಿಯಲ್ಲಿ ಬೀಳ್ಕೊಟ್ಟರು. ಮೆರವಣಿಗೆಯ ಹಾದಿಯುದ್ದಕ್ಕೂ ವಿಶೇಷ ಗೌರವ ಸಿಕ್ಕಿದ್ದಲ್ಲದೇ ಅವರಿಗೆ ಜನರು ಹಾರ ಹಾಕಿ ಗೌರವಿಸಿದರು.