ನ್ಯೂಸ್ ನಾಟೌಟ್: ಪ್ರತಿಯೊಬ್ಬರಿಗೂ ಸ್ವಂತದ್ದೊಂದು ಮನೆಯ ಕನಸಿರುತ್ತದೆ. ಇಲ್ಲೊಂದು ಬಡ ಕುಟುಂಬವೂ ಹೊಸ ಮನೆ ಕಟ್ಟಬೇಕು ಎಂದು ಕನಸು ಕಟ್ಟಿಕೊಂಡಿತ್ತು. ಇನ್ನೇನು ಕಂಡ ಕನಸು ಕೈಗೂಡುತ್ತದೆ ಅನ್ನುವಷ್ಟರಲ್ಲಿ ಇದ್ದದ್ದನ್ನೂ ಕಳೆದುಕೊಂಡು ಆ ಕುಟುಂಬ ಬೀದಿಗೆ ಬಿದ್ದಿರುವ ಕರುಣಾಜನಕ ಕಥೆಯೊಂದು ಬೆಳಕಿಗೆ ಬಂದಿದೆ.
ಹೌದು,ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿನ ಕುಟುಂಬವೊಂದು ಆಶ್ರಯ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸುವುದಕ್ಕೆ ಅರ್ಜಿ ಹಾಕಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಮೋನಪ್ಪ ಗೌಡರಿಗೆ ಮನೆಯೂ ಮಂಜೂರಾಗಿತ್ತು. ಹೀಗಾಗಿ ಹಳೆ ಮನೆಯನ್ನು ಮೋನಪ್ಪ ಗೌಡರು ಮುರಿದು ತೆಗೆದರು. ಹೊಸ ಮನೆಗೆ ಎಲ್ಲ ತಯಾರಿಯನ್ನೂ ಮಾಡಿಕೊಂಡರು. ಹೊಸ ಮನೆಗೆ ಅಡಿಪಾಯ ಹಾಕಿದ್ದ ಕುಟುಂಬ ಪಂಚಾಯತ್ ಹಣ ಬಿಡುಗಡೆಯಾಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಕೈ ಸಾಲ ಪಡೆದು ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.
ಆದರೆ ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಕೆಲಸವನ್ನು ಮುಂದುವರಿಸಲಾಗದೆ ಅರ್ಧದಲ್ಲೇ ನಿಲ್ಲಿಸಲಾಗಿದೆ. ಹೊಸ ಮನೆಗಾಗಿ ಹಳೆ ಮನೆಯನ್ನು ಮುರಿದು ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲು ಜಾಗವೂ ಇಲ್ಲದ ಸ್ಥಿತಿಯಲ್ಲಿದೆ. ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲ್ಲೇ ಬದುಕಬೇಕಾದ ಅನಿವಾರ್ಯತೆಯಲ್ಲಿದೆ.
ಸರಿಯಾದ ಮನೆ ಇಲ್ಲದ ಕಾರಣ ಮನೆ ಯಜಮಾನ ಮೋನಪ್ಪರ ಹೆಂಡತಿ ಮತ್ತು ಮಗ ತವರು ಮನೆ ಸೇರಿದ್ದಾರೆ. ಮೋನಪ್ಪರು ಮಾತ್ರ ಇದೀಗ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲೇ ಜೀವನ ಸಾಗಿಸುವಂತಾಗಿದೆ. ಮುಂಡೂರು ಪಂಚಾಯತ್ ಗೆ ಸಂಬಂಧಪಟ್ಟವರು ಈ ಭಾಗಕ್ಕೆ ಭೇಟಿ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಇನ್ನೇನು ಮಳೆಗಾಲ ಸಮೀಪಿಸುತ್ತಿದ್ದು, ಏನು ಮಾಡುವುದು ಎಂದು ತೋಚದೆ ಕುಟುಂಬ ಸದಸ್ಯರು ಆಕಾಶದ ಕಡೆಗೆ ಕೈ ತೋರಿಸಿಕೊಂಡು ಮರುಗುತ್ತಿದ್ದಾರೆ.