ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ವಿಭಾಗ, ಮಕ್ಕಳ ವಿಭಾಗ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಅಂಗವಾಗಿ ತಾಯಿಯ ಹಾಲಿನ ಮಹತ್ವದ ಬಗ್ಗೆ ಕಾರ್ಯಕ್ರಮ ಆ. 05 ಮಂಗಳವಾರದಂದು
ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ ಕೆ.ವಿ ಚಿದಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್ ಕಾರ್ಯಕ್ರಮವನ್ನು ಉದ್ದೇಶಿಸಿ, ಸ್ತನ್ಯಪಾನದ ಮಹತ್ವವನ್ನು ತಿಳಿಸಿದರು.
ಬಳಿಕ ಸ್ತ್ರೀ ಮತ್ತು ಪ್ರಸೂತಿ ವಿಭಾಗ ಮುಖ್ಯಸ್ಥೆ ಡಾ ಗೀತಾ ದೊಪ್ಪಾ, ಮಕ್ಕಳ ವಿಭಾಗ ಮುಖ್ಯಸ್ಥೆ ಸುಧಾ ರುದ್ರಪ್ಪ, ಕಮ್ಯುನಿಟಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ ಅಪೂರ್ವ ದೊರೆ ಮಾತನಾಡಿ ” ತಾಯಿಯ ಹಾಲು ಶಿಶುಗಳಿಗೆ ಅಮೃತವಿದ್ದಂತೆ. ಇದು ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಿಂದ ಶಿಶುಗಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ಹೊಂದಿರುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅತ್ಯುತ್ತಮವಾದ ಪೋಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎದೆಹಾಲು ಮಗುವಿನ ಅರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ್ದು, ಇದು ಮಗುವಿನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ನಡುವಿನ ವಾತ್ಸಲ್ಯ, ಬಾಂಧವ್ಯ ಮತ್ತು ಪ್ರೀತಿ ಸಹ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಬಳಿಕ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತನಾಡಿ ತಾಯಿ ಎದೆ ಹಾಲಿನ ಮಹತ್ವ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಬಳಿಕ ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಕಿರು ಪ್ರಹಸನ ನಡೆಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾದ್ಯಾಪಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.