ಕರಾವಳಿ

ಮಂಗಳೂರು:ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸ್ಪೀಕರ್ ಯು.ಟಿ ಖಾದರ್ ಮಗಳು..!ಪುತ್ರಿಯ ಚುನಾವಣೆ ಸ್ಪರ್ಧೆ ಕುರಿತು ತಂದೆ ಹೇಳಿದ್ದೇನು?

ನ್ಯೂಸ್ ನಾಟೌಟ್ : ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮ ಅವರು ಈ ಹಿಂದೆ ತಂದೆಯೆದುರಲ್ಲೇ ಇಂಗ್ಲೀಷ್‌ನಲ್ಲಿ ಅಮೋಘ ಭಾಷಣ ಮಾಡುವುದರ ಮೂಲಕ ಭಾರಿ ವೈರಲ್ ಆಗಿದ್ದರು.ಕಾರ್ಯಕ್ರಮದಲ್ಲಿ ತಂದೆ ಸಭಿಕರಾಗಿ ಪಾಲ್ಗೊಂಡು ಮುದ್ದಿನ ಮಗಳ ಸಂಪೂರ್ಣ ಭಾಷಣವನ್ನು ಆಲಿಸಿದ್ದರು. ಮುಂದೊಂದು ದಿನ ಮಗಳಿಗೂ ರಾಜಕೀಯದಲ್ಲಿ ಭವಿಷ್ಯವಿದೆ ಎಂದು ಜನ ಹೇಳುತ್ತಿದ್ದ ಹಾಗೆ ಇದೀಗ ಅಚ್ಚರಿಯೆಂಬಂತೆ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಯು.ಟಿ. ಖಾದರ್ ಅವರ ಸ್ವಕ್ಷೇತ್ರ ಮಂಗಳೂರು (ಉಳ್ಳಾಲ)ದ ದೇರಳಕಟ್ಟೆಯಲ್ಲಿ ಯು.ಟಿ.ಫರೀದ್ ಫೌಂಡೇಶನ್‌ ಆಶ್ರಯದಲ್ಲಿ ಭಾನುವಾರ ನಡೆದ ಸೌಹಾರ್ದ ಕ್ರೀಡಾಕೂಟದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆದಿದ್ದು, ಈ ವೇಳೆ ವೇದಿಕೆಯಲ್ಲಿ ಹವ್ವಾ ನಸೀಮ ಸದಸ್ಯತ್ವ ಅರ್ಜಿಗೆ ಸಹಿ ಹಾಕಿ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಖಾದರ್ ಅವರು ಸ್ಪೀಕರ್ ಆಗಿರುವುದರಿಂದ ಕೆಲಸದ ನಿಮಿತ್ತ ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಆದರೆ ಖಾದರ್ ಅವರ ಆಪ್ತ ಕಾಂಗ್ರೆಸ್‌ ಮುಖಂಡರ ಸಮ್ಮುಖದಲ್ಲಿ ಪುತ್ರಿ ಹವ್ವಾ ಪಕ್ಷ ಸೇರಿದ್ದಾರೆ. ಪ್ರಸ್ತುತ ಹವ್ವಾ ನಸೀಮ ಅವರು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸೈಕಾಲಜಿ ವಿಷಯದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉತ್ತಮ ವಾಗ್ಮಿಯೂ ಆಗಿರುವ ಹವ್ವಾ, ಕಾಂಗ್ರೆಸ್‌ ಪಕ್ಷ ಸೇರಿರುವುದು ಕುತೂಹಲ ಗರಿಗೆದರುವಂತೆ ಮಾಡಿದೆ.ದೇರಳಕಟ್ಟೆ ಕಣಚೂರು ಮೈದಾನದಲ್ಲಿ ನಡೆದ ಈ ‘ಸೌಹಾರ್ದ ಕ್ರೀಡಾಕೂಟ’ವನ್ನು ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದ.ಕ. ಜಿಲ್ಲಾ ಕಾಂಗ್ರೆಸ್ ಸದಸ್ಯ ಸುರೇಶ್ ಭಟ್ನಗರ, ಉಪಾಧ್ಯಕ್ಷ ದಿನೇಶ್ ರೈ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಹಿರಿಯರಾದ ಬಾಬು ಸುವರ್ಣ, ಹರ್ಷರಾಜ್ ಮುದ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಉಳ್ಳಾಲ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಹಾಜರಿದ್ದರು.ನಾವು ನಾಯಕರು ಉಳಿದೆಲ್ಲರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತೇವೆ. ಆದರೆ ಅನೇಕರು ತಮ್ಮ ಮಕ್ಕಳನ್ನೇ ಸೇರಿಸಲ್ಲ. ನಮ್ಮ ಮಕ್ಕಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದರೆ ಆಗ ಉಳಿದವರಿಗೂ ಪ್ರೇರಣೆಯಾಗುತ್ತದೆ. ಹಾಗಾಗಿ ನನ್ನ ಮಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರಲ್ಲಿ ಚುನಾವಣೆ ಸ್ಪರ್ಧೆಯ ಉದ್ದೇಶವಿಲ್ಲ ಎಂದು ಸ್ಪೀಕರ್‌ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

ನಾನೀಗ ಸ್ಪೀಕರ್ ಆಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್‌ ನನಗೆ, ನಮ್ಮ ಕುಟುಂಬಕ್ಕೆ ಬಹಳಷ್ಟು ನೀಡಿದೆ. ನಮ್ಮ ಕುಟುಂಬದ ಎಲ್ಲರೂ ಕಾಂಗ್ರೆಸ್‌ ಸದಸ್ಯರಾಗಿದ್ದಾರೆ. ಅದೇ ದಾರಿಯಲ್ಲಿ ಈಗ ನನ್ನ ಪುತ್ರಿಯೂ ಸೇರಿದ್ದಾರೆ. ದೊಡ್ಡ ಸಮಾರಂಭದಲ್ಲಿ ಪಕ್ಷ ಸೇರ್ಪಡೆ ಆಗಬಹುದಿತ್ತು. ಆದರೆ ಆರಂಭದಲ್ಲಿ ಪಕ್ಷದ ಕಾರ್ಯಕರ್ತರು ಪರಿಚಯ ಆಗಬೇಕು ಅಂತ ಕಾರ್ಯಕರ್ತರ ನಡುವೆಯೇ ಪಕ್ಷ ಸೇರಿದ್ದಾರೆ ಎಂದರು.ಪುತ್ರಿಯ ಚುನಾವಣೆ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಖಾದರ್‌, ನಾನು ಕಾಲೇಜಿನಲ್ಲಿದ್ದಾಗ ಶಾಸಕ, ಮಂತ್ರಿ, ಸ್ಪೀಕರ್ ಆಗುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ನಮ್ಮ ಪ್ರಯತ್ನ ಮಾಡಬೇಕಷ್ಟೆ. ಚುನಾವಣೆ ಉದ್ದೇಶದಿಂದ ಮಾತ್ರವೇ ನನ್ನ ಪುತ್ರಿ ಪಕ್ಷ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

Related posts

ಬಡವರಿಗೆ ನೀರು ಸಿಗದೆ ಅನ್ಯಾಯ ಆಗ್ತಿದೆ..

ಮಂಗಳೂರು: ಸಮುದ್ರ ಮಧ್ಯೆ ಕುಸಿದುಬಿದ್ದದ್ದೇಕೆ ನೌಕಾ ಸಿಬ್ಬಂದಿ..? ಆ ಮಧ್ಯರಾತ್ರಿ ತೈಲ ಸಾಗಾಟ ನೌಕೆಯಲ್ಲಿದ್ದಾತನಿಗೇನಾಯ್ತು..?

ಸುಳ್ಯ:ಸೈಂಟ್ ಜೋಸೆಫ್ ಫ್ರೌಢಶಾಲೆಯಲ್ಲಿ ‘ವಿದ್ಯಾರ್ಥಿ ಸಂಸತ್ತು ಅಧಿವೇಶನ’ ಕಾರ್ಯಕ್ರಮ