ನ್ಯೂಸ್ ನಾಟೌಟ್: ಮಾಜಿ ಬಿಗ್ಬಾಸ್ ಸ್ಪರ್ಧಿ, ನಟಿ ನಮ್ರತಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಕಿರುಕುಳದ ಸಂದೇಶವನ್ನು ಕಳುಹಿಸಿದ್ದಾನೆ. ಪದೇ ಪದೇ ಒಂದೇ ರೀತಿಯ ಸಂದೇಶವನ್ನು ಕಳುಹಿಸಿ ನಮ್ರತಾಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ನಮ್ರತಾ ಸ್ಕ್ರೀನ್ ಶಾಟ್ ತೆಗೆದು ಸ್ಟೋರಿ ಹಂಚಿಕೊಂಡಿದ್ದು, ನಟಿ ನಮ್ರತಾಗೆ ಇನ್ಸ್ಟಾ ಗ್ರಾಮ್ ನಲ್ಲಿ ರೋಷನ್ ಎಂಬ ವ್ಯಕ್ತಿ ರಾಕಿ ಜಿ43 (Rocky.g43) ಎನ್ನುವ ಖಾತೆಯಿಂದ ಹಲವು ಬಾರಿ ಸಂದೇಶಗಳನ್ನು ಕಳುಹಿಸಿದ್ದಾನೆ. ರೋಷನ್ ಪ್ರೊಫೈಲ್ ಪಿಕ್ಚರ್ ನಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಂದಿಗಿರುವ ಫೋಟೋ ಇದೆ.
“ನನಗೆ ರಾಜಕಾರಣಿ ಮತ್ತು ವಿಐಪಿಗಳ ನಂಟಿದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ ಗಳನ್ನು ವ್ಯವಸ್ಥೆ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ. ನೀವು ಯಾವುದೇ ರೀತಿಯಲ್ಲಿ ನಿಮ್ಮ ಫೋಟೋ, ನಂಬರ್ ಅಥವಾ ವೈಯಕ್ತಿಕವಾಗಿ ಯಾವುದೇ ಮಾಹಿತಿಯನ್ನು ನೀಡಬೇಕಿಲ್ಲ. ನೀವು ಹೆಚ್ಚಿನ ಶುಲ್ಕವನ್ನು ಕೇಳಿದರೂ ಅದನ್ನು ನಾವು ನೀಡಲು ಸಿದ್ದ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದು ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ” ಎಂದು ರೋಷನ್ ಎರಡು ಮೂರು ಬಾರಿ ನಮ್ರತಾಗೆ ಸಂದೇಶ ಕಳಿಸಿದ್ದಾನೆ.
ರೋಷನ್ ಎನ್ನುವಾತ ಕಳುಹಿಸಿರುವ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡು ಸಾಕಿನ್ನು ನಿಲ್ಲಿಸು ಎಂದು ನಮ್ರತಾ ಬರೆದುಕೊಂಡಿದ್ದಾರೆ.
ಕಿರುತೆರೆ ನಟಿ ಅಥವಾ ರಿಯಾಲಿಟಿ ಶೋಗಳಲ್ಲಿ ಮಿಂಚಿ ಜನಪ್ರಿಯರಾಗುವ ಕಲಾವಿದರಿಗೆ ಈ ರೀತಿಯ ಸಂದೇಶಗಳು ಸೋಶಿಯಲ್ ಮೀಡಿಯಾದಲ್ಲಿ ಬರುತ್ತಲೇ ಇರುತ್ತದೆ. ಕೆಲವರು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತಾರೆ. ಇನ್ನು ಕೆಲವರು ಬ್ಲಾಕ್ ಮಾಡುತ್ತಾರೆ.