ನ್ಯೂಸ್ ನಾಟೌಟ್:ದರೋಡೆಕೋರರ ಬಂಧಿಸುತ್ತಿರುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ನೀಡಿರುವ ಘಟನೆ ಬಗ್ಗೆ ವರದಿಯಾಗಿದೆ.ದರೋಡೆಕೋರರನ್ನು ಪೊಲೀಸರು ಬಂಧಿಸಲು ಹೋದಾಗ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಹರಿಯಾಣ ಮೂಲದ ಆರೋಪಿಗಳಾದ ತಸ್ಲಿಂ ಹಾಗೂ ಶರೀಫ್ ಕಾಲಿಗೆ ಗುಂಡು ಹಾರಿಸಿದ್ದಾರೆ.ಆರೋಪಿಗಳು ಕಲಬುರಗಿ ಜಿಲ್ಲೆಯ ರಾಮನಗರ ಬಡಾವಣೆಯ ಎಸ್‌ಬಿಐ ಎಟಿಎಂನಿಂದ (SBI ATM) 18 ಲಕ್ಷ ರೂ. ಹಣವನ್ನು ದೋಚಿದ್ದರು. ಘಟನೆಯಲ್ಲಿ ಪಿಎಸ್ಐ ಬಸವರಾಜ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಟಿಎಂ ದರೋಡೆಕೋರರ ಮೇಲೆ ಪೊಲೀಸರ ಫೈಯರಿಂಗ್ ಪ್ರಕರಣದ ಬಗ್ಗೆ ಕಲಬುರಗಿಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾಧ್ಯದವರೊಂದಿಗೆ ಮಾತನಾಡಿ ಮಾಹಿತಿ ನೀಡಿದರು. ತಸ್ಲಿಂ ಹಾಗೂ ಶರೀಫ್ ಏ. 9 ರಂದು ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದ ಆರೋಪಿಗಳು. ಬೇಲೂರು ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಸಬ್ ಅರ್ಬನ್ ಠಾಣೆ ಸಿಪಿಐ ಸಂತೋಷ್ ತಟ್ಟೆಪಲ್ಲಿ ಹಾಗೂ ಪಿಎಸ್ಐ ಬಸವರಾಜ್ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದರು.ದರೋಡೆ ವೇಳೆ ಎಟಿಎಂ ಮುಂಭಾಗದಿಂದ ಈ ಬಿಳಿಬಣ್ಣದ ಐ20 ಕಾರು ಹಾದು ಹೋಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆಗಿಳಿದಿದ್ದರು. ದರೋಡೆಕೋರರ ಮೇಲೆ ಫೈಯರಿಂಗ್ ಮಾಡಿದ್ದ ಸಂದರ್ಭ ಐ20 ಕಾರಿನಲ್ಲಿ ನಾಲ್ವರು ಇದ್ದರು. ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ಗಾಯಾಳು ತಸ್ಲಿಂ ಮತ್ತು ಶರೀಫ್‌ನನ್ನ ಜಿಮ್ಸ್ ಟ್ರಾಮಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಬಂಧಿತ ಆರೋಪಿಗಳಾದ ತಸ್ಲಿಂ ವಿರುದ್ಧ 8 ಪ್ರಕರಣಗಳು ಹಾಗೂ ಶರೀಫ್ ವಿರುದ್ಧ 3 ಪ್ರಕರಣ ದಾಖಲಾಗಿವೆ. ಈ ಗ್ಯಾಂಗ್ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಎಟಿಎಂಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು ಎಂದು ಹೇಳಿದರು.