ನ್ಯೂಸ್ ನಾಟೌಟ್: ಈ ಜಗತ್ತಿನಲ್ಲಿ ಏನೇನೋ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ತರ್ಕಕ್ಕೆ ನಿಲುಕದವುಗಳೂ ಸೇರಿಕೊಂಡಿವೆ.ಒಂದು ಕ್ಷಣ ಯೋಚನೆ ಮಾಡಿದಾಗ ಹೀಗೂ ಉಂಟೇ ಅಂತಲೂ ಅನ್ನಿಸಿಬಿಡುತ್ತೆ.ಹೌದು , ಇಂತಹುದ್ದೇ ಒಂದು ಘಟನೆ ಬಗ್ಗೆ ಕೊಡಗು ಜಿಲ್ಲೆಯಿಂದ ವರದಿಯಾಗಿದೆ. ಹಾಗಾದರೆ ಆ ಘಟನೆ ಏನು ಅನ್ನೋದನ್ನ ನಾವಿಲ್ಲಿ ತಿಳ್ಕೊಳ್ಳೋಣ ಬನ್ನಿ..
ಕೊಡಗು ಜಿಲ್ಲೆಯ ವ್ಯಕ್ತಿಯೋರ್ವ ತನ್ನ ಪತ್ನಿ ಕಾಣೆಯಾಗಿದ್ದಾಳೆ ಹುಡುಕಿಕೊಡಿ ಪ್ಲೀಸ್ ಎಂದು ಹೇಳಿ ಠಾಣೆಗೆ ದೂರು ಕೊಟ್ಟಿದ್ದ. ದೂರು ಕೊಟ್ಟ ವರ್ಷದಲ್ಲೇ ಅಲ್ಲೊಂದು ಮಹಿಳೆಯ ಅಸ್ತಿಪಂಜರ ದೊರೆತಿತ್ತು. ಪೊಲೀಸರ ಆಣತಿಯಂತೆ ಅದೇ ಸ್ಥಳದಲ್ಲಿ ಶವಸಂಸ್ಕಾರ ಮಾಡಿ ಮನೆಗೆ ಬಂದಿದ್ದವನನ್ನು ನೀನೆ ಕೊಲೆ ಮಾಡಿದ್ದೀಯಾ ಅಂತ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿಯೇಬಿಟ್ಟಿದ್ರು. ಎರಡು ವರ್ಷ ಜೈಲು ವಾಸ ಅನುಭವಿಸಿ ಇನ್ನೂ ಕೋರ್ಟು ಕಟ್ಟಲೆ ಅಂತ ಅಲೆಯುತ್ತಿರುವವನ ಮುಂದೆ ಸತ್ತು ಸಂಸ್ಕಾರವಾಗಿದ್ದವಳು ಎದ್ದು ಬಂದರೆ ಏನಾಗಬಹುದು ನೀವೇ ಹೇಳಿ ನೋಡೋಣ..!! ಎರಡು ವರ್ಷ ಜೈಲು ವಾಸ ಅನುಭವಿಸಿದವನಿಗೆ ಆಶ್ಚರ್ಯವೋ ಆಶ್ಚರ್ಯ.. ಒಂದು ಕ್ಷಣ ಆತನ ಕಣ್ಣುಗಳನ್ನು ಅವನಿಗೆ ನಂಬೋದಕ್ಕೆ ಅಸಾಧ್ಯವಾಯ್ತು..!ಈ ಘಟನೆ ನಡೆದಿರೋದು, ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿ.
ಈ ದಂಪತಿಗೆ ಇಬ್ಬರು ಮಕ್ಕಳು.ಒಂದು ಗಂಡು , ಒಂದು ಹೆಣ್ಣು.ತಾನಾಯ್ತು ತನ್ನ ಕುಟುಂಬವಾಯ್ತು ಅಂತ ದುಡಿದು ಸಾಕುವ ಪ್ರೀತಿಯ ಗಂಡನಿದ್ದರೂ ಕೂಡ ಆಕೆ ಗಂಡ, ಮಕ್ಕಳು ಮರಿಗಳನ್ನು ಬಿಟ್ಟು ಹೋಗಿದ್ದಳು. ಯಾರೊಂದಿಗೋ ಇದ್ದಾಳೆ ಎನ್ನುವುದು ತಿಳಿದು ಫೋನ್ ಕರೆ ಮಾಡಿ ಇದೆನೆಲ್ಲಾ ಬಿಟ್ಟು ಬಾ ಅಂತ ಹೆತ್ತ ತಾಯಿ, ಗಂಡ ಮತ್ತು ಮಕ್ಕಳೆಲ್ಲರೂ ಕರೆದಿದ್ದರು. ಆದರೂ ಆಕೆ ಬಂದಿರಲೇ ಇಲ್ಲ. ಹೀಗಾಗಿ ಆಕೆಯ ಸುದ್ದಿಯನ್ನು ಬಿಟ್ಟು ಕುಟುಂಬದವರು ಸುಮ್ಮನಾಗಿದ್ದರು. ಮುಂದೆ ಏನಾದರೂ ತೊಂದರೆಯಾದರೆ ನಮ್ಮ ತಲೆಗೆ ಬರಬಹುದು ಎಂದು ಗಂಡ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ.ಬಳಿಕ ಆತ ಅನುಭವಿಸಿದ ನರಕ ಯಾತನೆ ಅಷ್ಟಿಷ್ಟಲ್ಲ. ಬಸವನಹಳ್ಳಿ ಸುರೇಶ್ ತಾನು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಪರಿಸ್ಥಿತಿ ಎದುರಿಸಬೇಕಾಯ್ತು.
2021ರಲ್ಲಿ ಈತನ ಹೆಂಡತಿ ಕಾಣೆಯಾಗಿದ್ದಳು.ಆಕೆಯದ್ದೇ ದೂರದ ನೆಂಟನೊಬ್ಬನ ಹಿಂದೆ ಹೋಗಿದ್ದಳು. ಹೀಗಾಗಿ ಸುರೇಶ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.ಆದರೆ ಆಕೆಯನ್ನು ಹುಡುಕುವ ಪ್ರಯತ್ನವೂ ನಡಿಲಿಲ್ಲ. ಇತ್ತ ಒಂದು ವರ್ಷವಾದರೂ ಆಕೆ ತಿರುಗಿ ಬರಲೂ ಇಲ್ಲ. ಸುರೇಶ್ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರೆ ನಿಮ್ಮ ಹೆಂಡತಿ ಶವ ದೊರೆತಿದೆ ಎಂದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಯಾವುದೋ ಅಸ್ತಿ ಪಂಜರ ತೋರಿಸಿ ನಿಮ್ಮ ಹೆಂಡತಿಯದ್ದೇ ಅಸ್ತಿ ಪಂಜರ, ಸಂಸ್ಕಾರ ಮಾಡಿ ಎಂದು ಅಲ್ಲೇ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಸಿದ್ದರು. ಅಲ್ಲಿಗೆ ಕುಶಾಲನಗರ ಪೊಲೀಸ್ ಠಾಣೆಗೆ ನೀಡಿದ್ದ ಕಂಪ್ಲೈಂಟ್ ಕ್ಲೋಸ್ ಆಗಿತ್ತು. ಈತನಿಗೆ ಮಾತ್ರ ಬೇರೆ ಬೇರೆ ಸೆಕ್ಷನ್ ಅಡಿಗಳಲ್ಲಿ ದೂರು ದಾಖಲಾಗಿರೋದ್ರಿಂದ ಬಸವನಹಳ್ಳಿಗೆ ಬಂದಿದ್ದ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದರು.
ಅಲ್ಲಿಗೆ ತಾನು ಮಾಡದ ತಪ್ಪಿಗೆ ಸುರೇಶ್ ಎರಡು ವರ್ಷ ಜೈಲಿನಲ್ಲಿ ಇದ್ದರು.ಹೀಗೆ ಜೈಲಿಗೆ ಹೋದ ಸುರೇಶ್ ಆಚೆಗೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವರ ಕಷ್ಟವನ್ನು ಅದ್ಹೇಗೋ ಕಂಡಿದ್ದ ವಕೀಲ ಪಾಂಡು ಪೂಜಾರಿ ಇವರ ಬೆನ್ನಿಗೆ ನಿಂತಿದ್ದಾರೆ. ಸಂಸ್ಕಾರ ಮಾಡಿದ್ದ ಅಸ್ತಿಪಂಜರ ಮತ್ತು ಮಿಸ್ ಆದ ಮಲ್ಲಿಗೆಯ ತಾಯಿ ಗೌರಿಯ ಡಿಎನ್ಎ ಪರೀಕ್ಷೆಗೆ ಕೋರ್ಟ್ ಅನುಮತಿ ಪಡೆದು ಪರೀಕ್ಷೆ ಮಾಡಿಸಿದ್ದಾರೆ. ಡಿಎನ್ಎ ವರದಿ ಬಂದಾಗ ಅದು ಹೊಂದಾಣಿಕೆ ಆಗಿಲ್ಲ. ಹೀಗಾಗಿ ಮಲ್ಲಿಗೆ ಕೊಲೆ ಆಗಿಲ್ಲ ಎಂದು ಕೋರ್ಟಿಗೆ ಮನವರಿಕೆ ಮಾಡಿ ಬೇಲ್ ಮೇಲೆ 2023 ರಲ್ಲಿ ಹೊರ ಬಂದಿದ್ದಾರೆ.
ಆದರೆ ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಲಿಗೆ 2025 ರ ಏಪ್ರಿಲ್ ಒಂದರಂದು ಮಡಿಕೇರಿಯ ಹೊಟೇಲ್ ಒಂದರಲ್ಲಿ ತನ್ನ ಪ್ರಿಯತಮನೊಂದಿಗೆ ಊಟ ಮಾಡುತ್ತಿದ್ದಳು ಎಂಬ ಸಂಗತಿ ಗೊತ್ತಾಗಿದೆ.ಇದನ್ನು ಕಂಡಿದ್ದ ಸುರೇಶನ ಸ್ನೇಹಿತರು ವಿಡಿಯೋ ಮಾಡಿ ಸುರೇಶ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಇಲ್ಲಿ ಇದೀಗ ಹಲವು ಪ್ರಶ್ನೆಗಳು ಸಾರ್ವಜನಿಕರಿಗೆ ಎದ್ದಿದ್ದು, ಆಕೆ ಸತ್ತಿಲ್ಲ ಬದುಕಿದ್ದಾಳೆ ಎನ್ನುದಾದರೆ ದೊರೆತ ಅಸ್ತಿಪಂಜರ ನಿಮ್ಮ ಪತ್ನಿಯದ್ದೇ. ಸಂಸ್ಕಾರ ಮಾಡಿ ಎಂದು ಪೊಲೀಸರು ಸಂಸ್ಕಾರ ಮಾಡಿಸಿದ್ದೇಕೆ.ಸಂಸ್ಕಾರ ಮಾಡಿದ ಮೇಲೆ ನೀನೆ ಆಕೆಯನ್ನು ಕೊಲೆ ಮಾಡಿದ್ದೀಯಾ ಎಂದು ಏನೂ ಗೊತ್ತಿಲ್ಲದ ಸುರೇಶನನ್ನು ಜೈಲಿಗೆ ಕಳುಹಿಸಿದ್ದೇಕೆ ಎನ್ನುವ ಬಗ್ಗೆ ಪ್ರಶ್ನೆಗಳು ಎದ್ದಿವೆ.