ಕ್ರೈಂ

ಮೆಹಂದಿ ಸಂಭ್ರಮದಲ್ಲಿದ್ದವರ ಮೇಲೆ ಲಾಠಿ ಬೀಸಿದ ಪೊಲೀಸರು…!

ಕೋಟ : ಬ್ರಹ್ಮಾವರ ತಾಲೂಕಿನ ಕೋಟತಟ್ಟು ಬಾರಿಕೆರೆ ಕೊರಗ ಕಾಲೋನಿಯಲ್ಲಿ  ತಡರಾತ್ರೆವರೆಗೂ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ವಿದ್ಯಮಾನವು ಡಿ.27ರ ತಡ ರಾತ್ರಿ ನಡೆದಿದೆ.

ಕಾಲೊನಿಯಲ್ಲಿ ರಾತ್ರಿ ಆಯೋಜಿಸಲಾದ ರಾಜೇಶ್ ಎನ್ನುವವರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಲಾಗಿತ್ತು. ಕಾರ್ಯಕ್ರಮಕ್ಕೆ ರಂಗೇರುತ್ತಿದ್ದಂತೆ ನಡುರಾತ್ರಿಯಾದರೂ ಡಿ ಜೆ ಸಂಗೀತ ನಿಲ್ಲಲಿಲ್ಲ. ಅದರ ವಿಪರೀತ ಶಬ್ದದಿಂದ ಅಕ್ಕ ಪಕ್ಕದವರಿಗೆ ಕಿರಿಕಿರಿ ಉಂಟಾದ್ದರಿಂದ ಕೋಟ ಪೊಲೀಸರಿಗೂ ದೂರು ಹೋಯಿತು.  ಸ್ಥಳೀಯರಿಂದ ಪೊಲೀಸ್ ಠಾಣೆಗೆ ದೂರು ಬಂದ ಹಿನ್ನಲೆಯಲ್ಲಿ  ಪೊಲೀಸರು ಸ್ಥಳಕ್ಕೆ ಎರಡು ಬಾರಿ   ಹೋಗಿ  ಡಿಜೆ ಬಂದ್ ಮಾಡಲು ತಿಳಿಸಿದ್ದರು. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಕೋಟ ಠಾಣಾಧಿಕಾರಿ ಸಂತೋಷ್ ಬಿಪಿ ನೇತೃತ್ವ ತಂಡವು ಸ್ಥಳಕ್ಕೆ ತೆರಳಿ ಡಿಜೆ ಬಂದ್ ಮಾಡುವಂತೆ ವಿನಂತಿಸಿದರು. ಇದರಿಂದ ಕೋಪಗೊಂಡ  ಸಮುದಾಯದವರು ಎಲ್ಲಾ ಕಡೆ ಮೆಹಂದಿ ಕಾರ್ಯಕ್ರಮ ನಡೆಯುತ್ತದೆ, ಅವರಿಗೆ ಏನು ಹೇಳಲ್ಲ ಆದ್ರೆ ನಮ್ಮ ಸಮುದಾಯಕ್ಕೆ ಏಕೆ ಅಡ್ಡಿ ಪಡಿಸುತ್ತೀರಿ ?  ನಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯವೇ.. ಎಂದು ಪೊಲೀಸರ ಮನವಿಯನ್ನೂ ಧಿಕ್ಕರಿಸಿದರು.  ಅಲ್ಲಿದ್ದ ಜನರು ಕರ್ತವ್ಯ ನಿರತ ಪೊಲೀಸರನ್ನು ಸುತ್ತುವರಿದು ಮಾತಿಗೆ ಮಾತು ಬೆಳೆದು ಉದ್ರಿಗ್ನ ಪರಿಸ್ಥಿತಿ ಉಂಟಾಯಿತು. ಪರಿಸ್ಥಿತಿ ಕೈ ಮೀರಿ ಹಲ್ಲೆ ನಡೆಯುವುದನ್ನು ಮನಗಂಡ ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಚಾರ್ಜ್ ಮಾಡಿದರು.  ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಯಿತು. ಇದರಿಂದ ರೊಚ್ಚಿಗೆದ್ದ ಕೊರಗ ಸಮುದಾಯದವರು ರಾತ್ರಿ ಕೋಟ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡವರನ್ನು ಬಿಡುಗಡೆ ಮಾಡುವಂತೆ ಅಗ್ರಹಿಸಿದರು. 

ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಬಾಸಿ, ಹಾಗೂ ಹಲವರೊಂದಿಗೆ ಮಾತುಕತೆ ನಡೆಸಿ, ಸಾರ್ವಜನಿಕ ಶಾಂತಿಭಂಗದ ಬಗ್ಗೆ ಕೇಸು ದಾಖಲಿಸಿ,  ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿ ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದರು. ಈ ಸಂದರ್ಭ ಲಾಠಿ ಚಾರ್ಜ್‌ನಿಂದ ಹಲವರಿಗೆ ಗಾಯವಾಗಿದ್ದು, ಗಾಯ ಗೊಂಡವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಸಂಪಾಜೆ ದರೋಡೆ ಪ್ರಕರಣ: ಮನೆಯಲ್ಲಿ ಗಂಡಸರಿಲ್ಲದ ಮಾಹಿತಿ ಕೊಟ್ಟವರು ಯಾರು?

5 ವರ್ಷದ ಮಗುವಿಗೆ ಹೃದಯಾಘಾತ..! ಮನೆಯವರು ಮರಣೋತ್ತರ ಪರೀಕ್ಷೆಗೆ ಒಪ್ಪಲಿಲ್ಲವೇಕೆ..?

ರಾಕೇಶ್‌ ಸಿದ್ದರಾಮಯ್ಯ ಸಾವಿನ ರಹಸ್ಯವೂ ಬಯಲಾಗಲಿದೆ ಎಂದ ಹೆಚ್.ಡಿ.ಕೆ..! ದಾಖಲೆಗಳಿವೆ ಎಂದ ಹೆಚ್.ಡಿ.ಕುಮಾರಸ್ವಾಮಿ