ನ್ಯೂಸ್ ನಾಟೌಟ್ : ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಬರೆ ಎಳೆದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಇದೀಗ ಸುಳ್ಯದಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ಹಿಗ್ಗಾಮುಗ್ಗಾ ಟೀಕಿಸಿದೆ.
ಮಂಗಳವಾರ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಭಾಗಿಯಾದರು. ಈ ವೇಳೆ ಮಾತನಾಡಿದ ಭಾಗೀರಥಿ ಮುರುಳ್ಯ , ‘ಕಾಂಗ್ರೆಸ್ ಸರ್ಕಾರಕ್ಕೆ ಬೆಲೆ ಏರಿಕೆ ಮಾಡುವುದೆಂದರೆ ಮಕ್ಕಳ ಆಟವಾಗಿದೆ. ಜನರ ಬದುಕನ್ನು ಕತ್ತಲೆಗೆ ದೂಡುವುದೇ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಇದ್ದಂತಿದೆ. ಇಂತಹ ಕೆಲಸವನ್ನು ಬಿಜೆಪಿ ಕಟು ಪದಗಳಿಂದ ಟೀಕಿಸುತ್ತದೆ. ಮಾತ್ರವಲ್ಲ ಇಂಧನ ಬೆಲೆಯನ್ನು ಇಳಿಸದಿದ್ದರೆ ಮುಂದೆ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯಿಂದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ನ್ಯಾನೋ ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕ್ರಮವನ್ನು ಖಂಡಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ಕೆಡೆಂಜಿ, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ಎ.ವಿ. ತೀರ್ಥರಾಮ, ವಿನಯ್ ಕುಮಾರ್ ಕಂದಡ್ಕ ಮತ್ತಿತರರು ಪಾಲ್ಗೊಂಡಿದ್ದರು.