ನ್ಯೂಸ್ ನಾಟೌಟ್: ‘ಒಕ್ಕಲಿಗ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ, ವಿವಿಧ ಕ್ಷೇತ್ರದಲ್ಲಿ ಸಾಧಕ ಯುವಕರಿದ್ದಾರೆ. ಅಂಥಹ ಪ್ರತಿಭೆಗಳಿಗೆ ಅವಕಾಶ ನೀಡುವ ಹಾಗೂ ಅವರನ್ನು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಕೆಲಸವನ್ನು ನಮ್ಮ ಸಮುದಾಯ ಮಾಡಬೇಕು’ ಎಂದು ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾಗಿರುವ ಡಾ.ರೇಣುಕಾ ಪ್ರಸಾದ್ ಕೆ.ವಿ ಕರೆ ನೀಡಿದ್ದಾರೆ.
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಥಮ ಮಹಾ ಅಧಿವೇಶನ ಮತ್ತು ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಆಸಕ್ತಿ ಹೊಂದಿದ ಅನೇಕ ಸಮುದಾಯದ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರಿಗೆ ಆರ್ಥಿಕ ಸಮಸ್ಯೆ ಇರುತ್ತದೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಕರೆದುಕೊಂಡು ಬಂದರೆ ನನ್ನ ಕೈನಿಂದ ಆಗುವ ಎಲ್ಲ ಸಹಾಯವನ್ನು ಮಾಡುತ್ತೇನೆ. ನಮ್ಮ ಸಮುದಾಯದಲ್ಲಿರುವ ಪ್ರತಿಭಾವಂತರನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು, ಯಾರ ಕಾಲೆಳೆಯುವುದಕ್ಕೂ ನಾವು ಹೋಗಬಾರದು ಎಂದು ಕಿವಿಮಾತು ಹೇಳಿದರು.
‘ಮಾತೃ ಸಂಘದ ಮೇಲೆ ಅಭಿಮಾನವಿದೆ’ ‘ಒಕ್ಕಲಿಗರ ಕಷ್ಟ ಸುಖಗಳಿಗೆ ಯಾವತ್ತೂ ಮಾತೃ ಸಂಸ್ಥೆ ಜೊತೆಗಿರುತ್ತದೆ. ಏನೇ ವಿಚಾರಗಳಿದ್ದರೂ ಎಷ್ಟೇ ಬ್ಯುಸಿ ಇದ್ದರೂ ಮಾತೃ ಸಂಘದ ಸಭೆಗಳಿಗೆ ಹೇಳಿ ಕಳಿಸಿದರೆ ಸಾಕು ಬರುತ್ತೇವೆ. ನಾವು ಈ ಸಂಘದ ಜೊತೆಗಿರುತ್ತೇವೆ, ನೀವು ಕೂಡ ಈ ಸಂಘದ ಜೊತೆಗಿರುತ್ತೀರಿ ಎನ್ನುವ ನಂಬಿಕೆ ಇದೆ’ ಎಂದು ರೇಣುಕಾ ಪ್ರಸಾದ್ ತಿಳಿಸಿದರು. ರಾಜ್ಯ ಒಕ್ಕಲಿಗರ ಸಂಘದಿಂದ ಒಂದು App ಮಾಡಲಾಗುತ್ತಿದೆ. ಈ ಮೂಲಕ ಸಮುದಾಯದ ಮಾಹಿತಿ, ಅಪ್ಡೇಟ್ಸ್ ಅದರಲ್ಲಿ ಸಿಗುತ್ತದೆ. ಎರಡು ತಿಂಗಳಲ್ಲಿ ಇದು ರೆಡಿಯಾಗುತ್ತದೆ. ಆ ಮೂಲಕ ಸಮುದಾಯದ ಜನರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ಸಮುದಾಯಕ್ಕೆ ಪ್ರತಿಯೊಬ್ಬರು ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಒಕ್ಕಲಿಗ ಸಮುದಾಯದ ನಾಯಕರಾದ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷ ಲೋಕಯ್ಯ ಗೌಡ .ಕೆ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಬೆಳ್ತಂಗಡಿ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಬಂಟ್ವಾಳ ಅಧ್ಯಕ್ಷ ಸಿ.ಕೆ. ಕುಶಾಲಪ್ಪ ಗೌಡ, ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ಇದರ ಅಧ್ಯಕ್ಷ ಪಿ.ಎಸ್. ಗಂಗಾಧರ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಅಧ್ಯಕ್ಷೆ ಸೌಮ್ಯ ಸುಕುಮಾರ್, ಒಕ್ಕಲಿಗರ ಗೌಡರ ಸೇವಾ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮಂಗ್ಲಿ ಮನೆ, ಒಕ್ಕಲಿಗರ ಗೌಡರ ಸೇವಾ ಸಂಘ (ರಿ) ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು, ದಿನೇಶ್ ಮಡಪ್ಪಾಡಿ, ಉದ್ಯಮಿ ಎಂ.ಬಿ ಸದಾಶಿವ ಸೇರಿದಂತೆ ಹಲವಾರು ಮಂದಿ ಗಣ್ಯರು ಪಾಲ್ಗೊಂಡಿದ್ದರು.