ನ್ಯೂಸ್ ನಾಟೌಟ್: ಇತ್ತೀಚೆಗಷ್ಟೆ ತಮಿಳಿನ ‘ಡ್ರ್ಯಾಗನ್’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದ ಅಸ್ಸಾಂ ಮೂಲದ ಕಯಾದು ಲೋಹರ್ ನಟನೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ‘ಡ್ರ್ಯಾಗನ್’ ಹಿಟ್ ಆದ ಬೆನ್ನಲ್ಲೆ ಅವರಿಗೆ ತಮಿಳು ಹಾಗೂ ತೆಲುಗು ಚಿತ್ರರಂಗದಿಂದ ಆಫರ್ಗಳ ಮೇಲೆ ಆಫರ್ಗಳು ಬರುತ್ತಿವೆ. ಆದರೆ ನಟಿ ಈಗ ಇಡಿ (ಜಾರಿ ನಿರ್ದೇಶನಾಲಯ)ಯ ಕೇಸ್ ನಲ್ಲಿ ಸಿಲುಕಿಕೊಂಡಿದ್ದಾರೆ. ಅದೂ ಕೇವಲ ಒಂದು ರಾತ್ರಿ ಪಾರ್ಟಿಗೆ ಹಾಜರಾಗಲು 35 ಲಕ್ಷ ರೂಪಾಯಿ ಪಡೆದಿದ್ದು ಇದೀಗ ನಟಿಯ ಸಂಕಷ್ಟಕ್ಕೆ ಕಾರಣವಾಗಿದೆ.
ಹೈ ಪ್ರೊಫೈಲ್ ಪಾರ್ಟಿಗಳಿಗೆ ನಟಿಯರನ್ನು ಕರೆಸುವುದು ಗುಟ್ಟೇನೂ ಅಲ್ಲ. ಇದೀಗ ತಮಿಳುನಾಡಿನಲ್ಲಿ ಸಖತ್ ಸದ್ದು ಮಾಡುತ್ತಿರುವ ‘ಟಾಸ್ಮಾಕ್’ (TASMAC) ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರಿಂದ ನಟಿ ಕಯಾದು ಲೋಹರ್ 35 ಲಕ್ಷ ರೂಪಾಯಿ ಹಣ ಪಡೆದಿರುವುದು ಇಡಿಯ ಗಮನಕ್ಕೆ ಬಂದಿದ್ದು, ನಟಿಯ ಹೆಸರು ಚಾರ್ಜ್ಶೀಟ್ ನಲ್ಲಿ ನಮೂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಮದ್ಯದ ವ್ಯವಹಾರ ನೋಡಿಕೊಳ್ಳುವ ಕಾರ್ಪೊರೇಷನ್ ಟಾಸ್ಮಾಕ್ ಆಗಿದ್ದು, ಏಪ್ರಿಲ್ ತಿಂಗಳಲ್ಲಿ ಟಾಸ್ಮಾಕ್ನ ಮುಖ್ಯ ಕಚೇರಿ ಸೇರಿದಂತೆ ಎಂಟು ವಿವಿಧ ಕಡೆಗಳಲ್ಲಿ ಇಡಿ ದಾಳಿ ಮಾಡಿತ್ತು. ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಇಡಿ ನಡೆಸಿದ ತನಿಖೆಯಲ್ಲಿ ಹಗರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರು ಕೆಲ ರಾಜಕಾರಣಿಗಳು, ಉದ್ಯಮಿಗಳ ಹೈ ಪ್ರೊಫೈಲ್ ಪಾರ್ಟಿ ಆಯೋಜನೆ ಮಾಡಿದ್ದು, ಆ ಪಾರ್ಟಿಗೆ ಹಾಜರಾಗಲು ನಟಿ ಕಯಾದು ಲೋಹರ್ ಅವರು ಬರೋಬ್ಬರಿ 35 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂಬ ದಾಖಲೆಗಳು ಸಿಕ್ಕಿವೆ.
ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕೆಲ ನಟಿಯರ ‘ಕತ್ತಲ ವ್ಯವಹಾರ’ದ ಬಗ್ಗೆ ಚರ್ಚೆ ನಡೆಯುತ್ತಿದೆ.