ಧರ್ಮಸ್ಥಳದ ನೇತ್ರಾವತಿ ನದಿ ತಟದ ಕಾಡಿನಲ್ಲಿ ಅನೇಕ ಶವ ಹೂತಿದ್ದೇನೆಂದು ಹೇಳಿರುವ ಅನಾಮಿಕ ವ್ಯಕ್ತಿ ತೋರಿಸಿದಂತೆ ಎಸ್ ಐಟಿ (ವಿಶೇಷ ತನಿಖಾ ತಂಡ) ತನಿಖೆ ನಡೆಸುತ್ತಿದೆ. ಈ ಬಗ್ಗೆಯೇ ವರದಿ ಮಾಡುತ್ತಿದ್ದ ಯೂಟ್ಯೂಬರ್ ಗಳ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ಇದು ಧರ್ಮಸ್ಥಳದ ಪಾಂಗಳದಲ್ಲಿ ನಡೆದ ಹೇಯ ಕೃತ್ಯ. ಮಾನವೀಯ ಸಮಾಜ ಈ ಕೃತ್ಯವನ್ನು ಎಂದಿಗೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ.
ವಾಕ್ ಸ್ವಾತಂತ್ರ್ಯದ ನೆಲೆಯಲ್ಲಿ ವರದಿಗಾಗಿ ತೆರಳಿದ್ದ ಮೂವರು ಯೂಟ್ಯೂಬರ್ ಗಳ ಮೇಲೆ ನೂರಕ್ಕೆ ಹೆಚ್ಚು ಮಂದಿ ಮುಗಿ ಬಿದ್ದು ದಾಳಿ ಮಾಡಿದ್ದಾರೆ. ಎಳೆದಾಡಿದ್ದಲ್ಲದೆ ಚರಂಡಿಯಲ್ಲಿ ಉರುಳಾಡಿಸಿ ಕಾಲಿನಿಂದ ಒದ್ದು ಪೈಪ್ ಗಳಿಂದ ಹಲ್ಲೆ ನಡೆಸಿ ಕ್ಯಾಮೆರಾಗಳನ್ನು ಪುಡಿಗಟ್ಟಿ ಮೆಮೋರಿ ಕಾರ್ಡ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಆಗಸ್ಟ್ 6ರಂದು ಹಿಂದೂಗಳ ಶ್ರದ್ಧಾ ಕೇಂದ್ರ ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಲ್ಲೆಯನ್ನು ನಡೆಸಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬಯಲಿಗೆ ಬಂದಿದೆ. ಯಾರೇ ಆಗಲಿ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿದ್ದರೆ ಪೊಲೀಸ್ ದೂರು ನೀಡಬಹುದು, ಕಾನೂನು ರೀತಿಯಲ್ಲಿ ಅಂಥವರ ವಿರುದ್ಧ ಕ್ರಮವನ್ನು ಜರುಗಿಸಲು ಅವಕಾಶವಿದೆ. ಪ್ರತಿಯೊಬ್ಬರಿಗೂ ಸಂವಿಧಾನ ಹಕ್ಕನ್ನು ನೀಡಿದೆ. ಎಷ್ಟೇ ದೊಡ್ಡವನಿದ್ದರೂ ಪ್ರಭಾವಶಾಲಿಯಾಗಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅವಕಾಶ ಯಾರಿಗೂ ಇಲ್ಲ. ಹಾಗಿದ್ದರೂ ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದಿರುವುದು ನಾಗರಿಕ ಸಮಾಜ ಒಟ್ಟಾಗಿ ಖಂಡಿಸಬೇಕಾದ ವಿಚಾರ.
ಈ ಸಮಾಜದ ಯಾವ ವ್ಯವಸ್ಥೆಯಲ್ಲಿದ್ದರೂ ಆರೋಪ ಪ್ರತ್ಯಾರೋಪ ಸಹಜ. ಪ್ರಶ್ನೆ ಕೇಳುವುದು, ಪ್ರಶ್ನಿಸುವುದು ಇದೆಲ್ಲ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಹಾಗಂತ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಆಗುವುದಿಲ್ಲ. ತಪ್ಪುಗಳ ಬಗ್ಗೆ ಧೈರ್ಯವಾಗಿ ಮಾತನಾಡಲು ಬಂದ ಯೂಟ್ಯೂಬ್ ಮಾಧ್ಯಮಗಳನ್ನು ಬಾಯಿ ಮುಚ್ಚಿಸುವ ಬೆದರಿಸುವ ತಂತ್ರಗಾರಿಕೆ ಇದು ಅನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ಹಿಂದೆ ಇರುವ ಪುಂಡ ಪುಕಾರಿಗಳನ್ನು ಮೊದಲು ಪೊಲೀಸರು ಹೆಡೆಮುರಿ ಕಟ್ಟಬೇಕು, ಚೆನ್ನಾಗಿ ಬೆಂಡೆತ್ತಿ ಉಪ್ಪು ಮೆಣಸು ಕಾರ ಹಾಕಿ ಅರೆದರೆ ಮುಂದಿನ ದಿನಗಳಲ್ಲಿ ಇಂತಹ ಗಲಾಟೆಗಳನ್ನು ತಡೆಯಬಹುದು, ಸಮಾಜದ ಸ್ವಾಸ್ಥ್ಯವನ್ನು ಉಳಿಸಿಕೊಂಡು ಹೋಗಬಹುದು. ಕಾನೂನು ಕೈಗೆತ್ತಿಕೊಳ್ಳುವ ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ದಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡ ಹೊಡೆದಾಟಕ್ಕೆ ಇಳಿದು ಸಮಾಜದ ಶಾಂತಿ ಕದಡಿದವರ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಮುಂದೆ ಯಾವ ರೀತಿಯ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.