ನ್ಯೂಸ್ ನಾಟೌಟ್ : ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಮೇಲೆ ವಸತಿ ಶಾಲೆಯ ಮಾಲೀಕ ಮತ್ತು ಅವರ ಸಹೋದರ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ಭಟೋಗ್ರಾ ಗ್ರಾಮದಲ್ಲಿ 1 ರಿಂದ 6ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಒಳಗೊಂಡ ವಸತಿ ಶಾಲೆಯನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಖರ್ಗಾಪುರ ಪೊಲೀಸ್ ಠಾಣೆ ಪ್ರಭಾರಿ ನಿತೇಶ್ ಜೈನ್ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಶನಿವಾರ ಇಬ್ಬರು ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 506 (ಮರಣ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಿದ್ದಾರೆ.
4ನೇ ತರಗತಿ ವಿದ್ಯಾರ್ಥಿನಿಯ ಸೋದರ ಸಂಬಂಧಿಯೊಬ್ಬರು ಆರೋಪಿಗಳಿಂದ ಆಕೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತೆಯ ಪೋಷಕರು ಬೇರೆ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಬಾಲಕಿ ಶಾಲೆಯ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು. ಆಕೆಯ ಸೋದರ ಸಂಬಂಧಿ ಕೂಡ ಸಂಸ್ಥೆಯಲ್ಲಿ ಓದುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಮಾಲೀಕನ ಸಹೋದರ ಕೂಡ ಸಂತ್ರಸ್ತೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.