ನ್ಯೂಸ್ ನಾಟೌಟ್: ಪ್ರೀತಿ-ಪ್ರೇಮದ ಬಲೆಗೆ ಬಿದ್ದ ಇಬ್ಬರ ಜೋಡಿಯೊಂದು ವಿವಾಹಪೂರ್ವ ಸಂಬಂಧದಿಂದ ಹುಟ್ಟಿದ ಇಬ್ಬರು ಕಂದಮ್ಮಗಳನ್ನು ಬರ್ಬರವಾಗಿ ಕೊಂದ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಪುದುಕ್ಕೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ 23 ವರ್ಷದ ಅನೀಶಾ ಹಾಗೂ 25 ವರ್ಷದ ಭವಿನ್ ಎಂಬವರನ್ನು ಬಂಧಿಸಲಾಗಿದೆ.
ಏನಿದು ಘಟನೆ..?
2020ರಲ್ಲಿ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದ ಅನೀಶಾ ಹಾಗೂ ಭವಿನ್ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ ಈ ಜೋಡಿ ವಿವಾಹಪೂರ್ವ ಲೈಂಗಿಕ ಸಂಬಂಧ ಬೆಳೆಸಿತ್ತು ಎಂದು ತಿಳಿದು ಬಂದಿದೆ. ಇದರಿಂದ 2022ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಅನೀಶಾ, ತನ್ನ ಕುಟುಂಬದವರಿಗೆ ಹೆದರಿ ಮಗುವನ್ನು ಕೊಂದು ಮೃತದೇಹವನ್ನು ಹೂಳಲು ಭವಿನ್ ಕೈಯಲ್ಲಿ ಕೊಟ್ಟಿದ್ದಳು. ನಂತರ 2024 ರಲ್ಲೂ ಇದೇ ರೀತಿ ಪುನಾರಾವರ್ತನೆಯಾಗಿದೆ. ಮಾರ್ಚ್‌ನಲ್ಲಿ ಜನಿಸಿದ್ದ ಗಂಡು ಮಗುವನ್ನೂ ಉಸಿರುಗಟ್ಟಿಸಿ ಕೊಂದು ಮೃತದೇಹವನ್ನು ಹೂಳಲು ಭವಿನ್ ಕೈಯಲ್ಲಿ ಅನೀಶಾ ಕೊಟ್ಟಿದ್ದಳು ಎಂದು ಆರೋಪಿಸಲಾಗಿದೆ.
ಅನೀಶಾಳ ಸಲಹೆಯಂತೆ ಭವಿನ್ ಎರಡೂ ಶಿಶುಗಳ ಮೃತದೇಹಗಳನ್ನು ತನ್ನ ಮನೆಯ ಹಿತ್ತಲಲ್ಲಿ ಹೂತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಅನೀಶಾ, ಭವಿನ್ ಸಂಬಂಧ ತೊರೆದು ಬೇರೆ ಹುಡುಗನನ್ನು ಮದುವೆಯಾಗಲು ತಯಾರಿ ನಡೆಸಿದ್ದು ಗೊತ್ತಾಗಿದ್ದಕ್ಕೆ ಭವಿನ್, ತಾನು ಹೂತಿದ್ದ ಶಿಶುಗಳ ಮೃತದೇಹಗಳ ಕಳೆಬರಗಳನ್ನು ಚೀಲದಲ್ಲಿ ಹಾಕಿಕೊಂಡು ಕಳೆದ ಭಾನುವಾರ ಮಧ್ಯರಾತ್ರಿ 12.30ರ ಸುಮಾರು ಪುದುಕ್ಕೋಡ್ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪೊಲೀಸರು ತನಿಖೆ ಮಾಡಿದಾಗ ಅನೀಶಾ ನವಜಾತ ಶಿಶುಗಳನ್ನು ಹತ್ಯೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ ಮೃತದೇಹಗಳ ಕಳೆಬರಗಳು ಗಂಡು ಶಿಶುಗಳದ್ದೇ ಎಂಬುದು ಖಚಿತಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನೀಶಾ ಗರ್ಭಿಣಿಯಾಗಿದ್ದು ಗೊತ್ತಿದ್ದರೂ ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ಹಾಗೂ ನವಜಾತ ಶಿಶುಗಳ ಹತ್ಯೆಯನ್ನು ಮರೆಮಾಚಿದ್ದಕ್ಕೆ ಭವಿನ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊದಲ ಮಗು ಎಂಟು ತಿಂಗಳಿಗೆ ಜನಿಸಿತ್ತು. ಪ್ರಸವದಲ್ಲಿ ತೊಂದರೆಯಾಗಿ ಮಗು ಸಹಜವಾಗಿ ಮೃತಪಟ್ಟಿತ್ತು ಎಂಬುದಾಗಿ ಆರೋಪಿ ಅನೀಶಾ ಹೇಳಿರುವುದಾಗಿ ತ್ರಿಶೂರ್ ಎಸ್‌ಪಿ ಹೇಳಿದ್ದಾರೆ.