ಕ್ರೈಂ

ಈಶ್ವರಮಂಗಲ: ಮೈಸೂರಿನ ಫೋಟೋಗ್ರಾಫರ್ ಮುಗುಳಿಗುಡ್ಡೆಯಲ್ಲಿ ಭೀಕರ ಕೊಲೆ, ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

438
Spread the love

ಪುತ್ತೂರು: ವಾರಗಳಿಂದ ನಾಪತ್ತೆಯಾಗಿದ್ದ ಮೈಸೂರಿನ ಫೋಟೋ ಗ್ರಾಫರ್ ಜಗನ್ನಾಥ ಶೆಟ್ಟಿ (57 ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಮುಗುಳಿಗುಡ್ಡೆ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಗನ್ನಾಥ ಶೆಟ್ಟಿ ಅವರನ್ನು ಅವರ ತೋಟದ ಉಸ್ತುವಾರಿ ವಹಿಸಿಕೊಂಡಿದ್ದ ಸುಬ್ಬಯ್ಯ ಅಲಿಯಾಸ್ ಬಾಲಕೃಷ್ಣ ರೈ ಪಟ್ಲಡ್ಕ ಹಾಗೂ ಜೀವನ್ ಪಟ್ಲಡ್ಕ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಸುಬ್ಬಯ್ಯನನ್ನು ಸಂಪ್ಯ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಏನಿದು ಘಟನೆ?

ಜಗನ್ನಾಥ್ ಶೆಟ್ಟಿ ತಮ್ಮ ಜಾಗವನ್ನು ನೋಡಲು ಮೈಸೂರಿನಿಂದ ಈಶ್ವರಮಂಗಲಕ್ಕೆ ಬಂದಿದ್ದರು. ಈ ವೇಳೆ ಪುಳಿತ್ತಡಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ವಾರಗಳಾಗಿದ್ದರೂ ಪತ್ತೆಯಾಗಿರಲಿಲ್ಲ. ಪುಳಿತ್ತಡಿಯಿಂದ ಒಮ್ನಿ ಕಾರಿನಲ್ಲಿ ಜಗನ್ನಾಥ್ ಸುಳ್ಯದತ್ತ ಹೊರಟ್ಟಿದ್ದರು. ಆದರೆ ಮೈಸೂರಿಗೆ ಅವರು ವಾಪಸ್ ಆಗಿರಲಿಲ್ಲ. ಪತ್ನಿ ಶರ್ಮಿಳಾ ಮೊಬೈಲ್‌ ಗೆ ಕರೆ ಮಾಡಿದ್ದರೂ ಫೋನ್ ಸ್ವಿಚ್ ಆಫ್ ಆಗಿತ್ತು. ಈ ನಿಟ್ಟಿನಲ್ಲಿ ಜಗನ್ನಾಥ ಶೆಟ್ಟಿ ಸಹೋದರ ಮಂಗಳೂರಿನಲ್ಲಿರುವ ಶಶಿಧರ್ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ನಿಗೂಢ ಕಣ್ಮರೆ ಪ್ರಕರಣವನ್ನು ಭೇದಿಸಲು ಪೊಲೀಸರು ಎರಡು ತಂಡಗಳಾಗಿ ತನಿಖೆ ನಡೆಸಿದ್ದರು. ಒಂದು ತಂಡ ಈಶ್ವರ ಮಂಗಲದಲ್ಲಿ ತನಿಖೆ ನಡೆಸಿತ್ತು. ಮತ್ತೊಂದು ತಂಡ ಮೈಸೂರಿನಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಜಗನ್ನಾಥ್‌ ಶೆಟ್ಟಿಗಾಗಿ ಹುಡುಕಾಟ ನಡೆಸಿತ್ತು.

ಮೊದಲೇ ಇತ್ತು ಅನುಮಾನ

ಜಗನ್ನಾಥ ಶೆಟ್ಟಿ ನಾಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಈಶ್ವರ ಮಂಗಲದ ಮೂನಡ್ಕ ಎಂಬಲ್ಲಿ ಜಾಗವೊಂದನ್ನು ಖರೀದಿಸಿರುವ ಜಗನ್ನಾಥ ಶೆಟ್ಟಿ ಸುಬ್ಬಯ್ಯನಿಗೆ ಸಾಕಷ್ಟು ಹಣ ನೀಡಿದ್ದರು. ಆದರೆ ಇದೇ ವಿವಾದ ಈಗ ಜಗನ್ನಾಥ ಶೆಟ್ಟಿಯವರ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಲಾಗಿದೆ. ಅಪಹರಿಸಿ ಕೊಲೆ ನಡೆಸಿರಬಹುದು ಅನ್ನುವ ಬಗ್ಗೆ ಪೊಲೀಸರಿಗೆ ಬಹಳಷ್ಟು ಅನುಮಾನ ಹುಟ್ಟಿಕೊಂಡಿತ್ತು. ಡಿಸಿಪಿ ಘಾನ ನೇತೃತ್ವದಲ್ಲಿ ಸಂಪ್ಯ ಠಾಣಾ ಇನ್ಸ್ ಪೆಕ್ಟರ್ ಉದಯ್ ರವಿ ಅವರ ತಂಡ ಸತತ ವಿಚಾರಣೆ ನಡೆಸಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿ ಸುಬ್ಬಯ್ಯ ಯಾರು?

ಆರೋಪಿ ಸುಬ್ಬಯ್ಯ ಅಲಿಯಾಸ್ ಬಾಲಕೃಷ್ಣ ರೈ ಪಟ್ಲಡ್ಕ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ದೂರುಗಳು ಕೇಳಿ ಬರುತ್ತಿದೆ. ಅಮಾಯಕರ ಜಾಗಕ್ಕೆ ಬೇಲಿ ಹಾಕಿಕೊಂಡು ಅಲ್ಲಿ ಕೃಷಿ ನಡೆಸಿ ನನ್ನದೇ ಜಮೀನು ಎಂದು ಹೇಳಿಕೊಳ್ಳುತ್ತಾನೆ ಸುಬ್ಬಯ್ಯ. ಅನ್ಯಾಯವನ್ನು ಕೇಳಲು ಹೋದರೆ ರೌಡಿಸಂ ಮೂಲಕ ಹೆದರಿಸಿ-ಬೆದರಿಸಿ ಸುಮ್ಮನಾಗಿಸುತ್ತಾನೆ. ಹೀಗೆ ಬಿಟ್ಟಿ ಜಮೀನಿನಲ್ಲಿ ಕುಳಿತುಕೊಂಡು ಬದುಕು ಕಟ್ಟಿಕೊಳ್ಳುತ್ತಿರುವ ಈತನಿಗೆ ಪ್ರಭಾವಿ ರಾಜಕಾರಣಿಗಳ ಬಲವೂ ಇದೆ ಎನ್ನಲಾಗುತ್ತಿದೆ.

See also  ವಕೀಲರ ಮುಂದೆ ನಟ ದರ್ಶನ್ ಕಣ್ಣೀರು..! ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದ ಡಿ ಬಾಸ್..!
  Ad Widget   Ad Widget   Ad Widget   Ad Widget   Ad Widget   Ad Widget