ನ್ಯೂಸ್ ನಾಟೌಟ್: ಚಾಮುಂಡಿ ತಾಯಿಗೆ ಹರಕೆಯಾಗಿ ಸಿಗುವ ಸೀರೆಗಳು ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಬಗ್ಗೆ ಅನುಮಾನ ಮೂಡಿಸಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಬಿಡುಗಡೆ ಮಾಡಿರುವ ವಿಡಿಯೋ ಸಾಕ್ಷಿ ಎಂಬಂತಿದೆ.
ಚಾಮುಂಡಿ ದೇವಸ್ಥಾನದಲ್ಲಿನ ಸೀರೆಗಳನ್ನು ಅಲ್ಲಿನ ನೌಕರ ದೊಡ್ಡ ಮೂಟೆ ಕಟ್ಟಿ ದೇವಸ್ಥಾನದ ಕಾರ್ಯದರ್ಶಿ ರೂಪ ಎಂಬವರ ಕಾರಿನಲ್ಲಿ ಇಡುತ್ತಿರುವ ವಿಡಿಯೋವನ್ನು ಸ್ನೇಹಮಹಿ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಹಾಗೇ ವಿಡಿಯೋ ಸಮೇತ ದೇವಸ್ಥಾನದ ಕಾರ್ಯದರ್ಶಿ ರೂಪ ಮೇಲೆ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಗೆ (KR Police Station) ದೂರು ನೀಡಿದ್ದಾರೆ.
ಚಾಮುಂಡಿ ದೇವಸ್ಥಾನದ ಕಾರ್ಯದರ್ಶಿ ರೂಪ ಮೇಲೆಯೇ ಈಗಾಗಲೇ ಹತ್ತು ಹಲವು ಆರೋಪಗಳು ಕೇಳಿ ಬಂದಿವೆ. ಹರಕೆ ರೂಪದಲ್ಲಿ ಚಾಮುಂಡಿ ತಾಯಿಗೆ ಸೀರೆ ಕೊಡುವಾಗ ಸೀರೆ ಖರೀದಿಯ ಬಿಲ್, ಸೀರೆ ಮೇಲಿನ ಸ್ಟೀಕರ್ ಎಲ್ಲವೂ ಇರಬೇಕು ಎಂಬುದು ಕಡ್ಡಾಯ. ಇದೇ ಕಡ್ಡಾಯದ ನಿಯಮವೇ ದೇವಸ್ಥಾನದ ಅಧಿಕಾರಿಗಳಿಗೆ ವರದಾನವಾಗಿದೆ. ಭಕ್ತರು ಕೊಟ್ಟ ಸ್ಟೀಕರ್ ಸಮೇತ ಸೀರೆಗಳನ್ನು ಸುಲಭವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಮೊದಲು ತಾಯಿ ಚಾಮುಂಡಿಗೆ ಉಡಿಸಿದ ಎಲ್ಲಾ ಸೀರೆಗಳನ್ನು ದೇವಸ್ಥಾನದಿಂದಲೇ ಹರಾಜು ಹಾಕಲಾಗುತ್ತಿತ್ತು. ದಿಢೀರನೆ ಸೀರೆ ಹರಾಜು ಪ್ರಕ್ರಿಯೆಗೆ ತಡೆ ಹಿಡಿಯಲಾಗಿದೆ. ಸೀರೆಗಳು ಯಾರ ಮನೆ ಸೇರುತ್ತಿವೆ ಎಂಬ ಲೆಕ್ಕವೇ ದೇವಸ್ಥಾನದಲ್ಲಿ ಇಲ್ಲ. ಇನ್ನೂ ಭಕ್ತರು ಕೊಟ್ಟ ಸೀರೆಗಳಿಗೆ ದೇವಸ್ಥಾನದಲ್ಲಿ ಲೆಕ್ಕವೇ ಸಿಕ್ಕಿಲ್ಲ ಎನ್ನಲಾಗುತ್ತಿದೆ.
Click