ನ್ಯೂಸ್ ನಾಟೌಟ್: ಪರಸ್ಪರ ಪ್ರೀತಿಸುತ್ತಿದ್ದ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಪ್ರೀತಿಸಿ ಮನೆಬಿಟ್ಟು ಹೋಗಿದ್ದರು.ಆದರೆ ಹುಡುಗಿ ಮನೆಯವರು ಹುಡುಗನ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸಿ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಇತ್ತು.22 ದಿನಗಳ ಹಿಂದೆ ರಾಧಿಕಾ ಮುಚ್ಚಂಡಿ ಮತ್ತು ಸದ್ರುದಿನ್ ಬೇಪಾರಿ ಎಂಬ ಜೋಡಿ ನಾಪತ್ತೆಯಾಗಿತ್ತು. ರಾಧಿಕಾ ಅವರ ತಾಯಿ ದೀಪಾ ಅವರು ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದೀಗ ಈ ಜೋಡಿ ಮುಂಬೈನಲ್ಲಿ ಪತ್ತೆಯಾಗಿದ್ದು, ಪೊಲೀಸರು ಅವರನ್ನು ಬೆಳಗಾವಿಗೆ ಕರೆತಂದಿದ್ದಾರೆ. ಜೋಡಿಯನ್ನು ಬೆಳಗಾವಿ ಮಹಿಳಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಈ ವೇಳೆ ರಾಧಿಕಾ, “ನಾನು ಸದ್ರುದಿನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ನಾನು ನನ್ನ ಗಂಡನ ಜೊತೆಗೆ ಇರುತ್ತೇನೆ” ಎಂದು ಹೇಳಿದ್ದಾರೆ.
ಈ ವೇಳೆ ರಾಧಿಕಾ ತಾಯಿ ದೀಪಾ ಅವರು ಮಗಳನ್ನು ಮನೆಗೆ ಕಳುಹಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. “ಮದುವೆ ಮಾಡಿಕೊಡುತ್ತೇವೆ ಮಗಳೇ” ಎಂದು ಕಣ್ಣೀರು ಹಾಕಿದ್ದಾರೆ, ಆದರೆ ರಾಧಿಕಾ ಒಪ್ಪಿಲ್ಲ. ತನ್ನ ಮಗಳ ಮಾತಿನಿಂದ ಮನನೊಂದ ದೀಪಾ ಠಾಣೆಯಲ್ಲೇ ಕುಸಿದು ಬಿದ್ದಿದ್ದಾರೆ. ಸಂಬಂಧಿಕರು ತಕ್ಷಣ ದೀಪಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ರುದ್ದೀನ್ ಭೇಪಾರಿ ಮತ್ತು ನರ್ಸಿಂಗ್ ಓದುತ್ತಿದ್ದ ಹಿಂದೂ ಹುಡುಗಿ ನಡುವೆ ಸ್ನೇಹ ಬೆಳೆದಿತ್ತು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಎರಡರಿಂದ ಮೂರು ವರ್ಷಗಳೇ ಕಳೆದಿತ್ತು. ಆದರೆ ಮನೆಯಲ್ಲಿ ಮದುವೆ ಸುದ್ದಿ ಹೇಳಿದ್ದೇ ತಡ ಹುಡುಗಿ ತಾಯಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.ಅನ್ಯಧರ್ಮದ ಹುಡುಗ ಎಂಬ ಒಂದೇ ಕಾರಣಕ್ಕೆ ಹಿಂದೂ ಹುಡುಗಿಯ ತಾಯಿ ಮದುವೆ ಬಗ್ಗೆ ಹೇಳಿದಾಗೆಲ್ಲಾ ಬೇಡ ಹೇಳುತ್ತಲೇ ಇದ್ದರಂತೆ. ಆದರೆ ತಾಯಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರೀತಿಸಿದ ನರ್ಸಿಂಗ್ ಯುವತಿಯನ್ನೇ ಮುಸ್ಲಿಂ ಯುವಕ ಸದ್ರುದಿನ್ ಬೇಪಾರಿ ಎಂಬಾತ ಅಪಹರಿಸಿಕೊಂಡು ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿತ್ತು.ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೌಂಡಿ (ಗಾರೆ ಕೆಲಸ) ಆಗಿ ಕೆಲಸ ಮಾಡ್ತಿದ್ದ ಸದ್ರುದಿನ್ ಬೇಪಾರಿ ಎಂಬಾತನ ವಿರುದ್ಧ ಯುವತಿ ಅಪಹರಣ ಆರೋಪಿಸಲಾಗಿತ್ತು, 22 ದಿನಗಳ ಹಿಂದೆ ಹಿಂದೂ ಹುಡುಗಿಯನ್ನ ಸದ್ರುದಿನ್ ಎಂಬಾತ ಅಪಹರಿಸಿ ಕರೆದೊಯ್ದಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.ಅಲ್ಲದೇ ಈ ಕೃತ್ಯಕ್ಕೆ ಸದ್ರುದಿನ್ ಗೆ ಆತನ ಕುಟುಂಬಸ್ಥರು ಸಾಥ್ ಕೊಟ್ಟಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹುಡುಗಿ ತಾಯಿ ದೂರು ದಾಖಲಿಸಿದ್ದರು. ಸದ್ಯ ಓಡಿ ಹೋಗಿರುವ ಈ ಜೋಡಿಯ ಪತ್ತೆಗಾಗಿ ಮೂರು ವಿಶೇಷ ತಂಡವನ್ನು ರಚಿಸಲಾಗಿದ್ದು, ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.