ಕರಾವಳಿ

ದಕ್ಷಿಣ ಕನ್ನಡದಿಂದ ಲೋಕಸಭಾ ಚುನಾವಣೆಗೆ ಒಕ್ಕಲಿಗ ಅಭ್ಯರ್ಥಿಯೇ ‘ಟ್ರಂಪ್ ಕಾರ್ಡ್’..? ಅಭ್ಯರ್ಥಿಗಳ ಪಟ್ಟಿಯಲ್ಲಿದೆ ಸುಳ್ಯದ ಏಕೈಕ ಒಕ್ಕಲಿಗನ ಹೆಸರು..!

ವಿಶ್ಲೇಷಣೆ: ಹೇಮಂತ್ ಸಂಪಾಜೆ

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ 2024ಕ್ಕೆ ದಿನಗಣನೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ನೇರ ಪೈಪೋಟಿ ಎದುರಾಗಲಿದೆ. ಮೇಲ್ನೋಟಕ್ಕೆ ಹಿಂದುತ್ವದ ಭದ್ರ ಕೋಟೆ ಎನಿಸಿದರೂ ಬಿಜೆಪಿಗೆ ಈ ಸಲ ಲಾಭವಾಗುವಂತೆ ಕಾಣ್ತಿಲ್ಲ. ಪಕ್ಷದೊಳಗಿನ ಕಚ್ಚಾಟ, ಆಂತರಿಕ ಭಿನ್ನಾಭಿಪ್ರಾಯವೇ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ಬಿಜೆಪಿಯೊಳಗಿನ ಈ ಕಚ್ಚಾಟ ಕಾಂಗ್ರೆಸ್ ಗೆ ವರದಾನವಾಗಲಿದೆಯೇ..? ಅನ್ನುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರವನ್ನು ತೆಗೆದುಕೊಂಡರೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಎಲ್ಲಕ್ಕಿಂತಲೂ ಹೆಚ್ಚು ಭಿನ್ನ ಅನ್ನಬಹುದು. ಇಲ್ಲಿನವರು ಹಿಂದುತ್ವದ ಅಜೆಂಡಾ ಹೊಂದಿದ್ದಾರೆ. ಯಾವ ವ್ಯಕ್ತಿ ಚುನಾವಣೆಗೆ ನಿಲ್ತಾರೆ ಅನ್ನೋದು ಇಲ್ಲಿ ವಿಷಯವೇ ಅಲ್ಲ. ಬಿಜೆಪಿಯಿಂದ ಯಾರು ನಿಲ್ತಾರೆ ಅನ್ನುವುದಷ್ಟೇ ಮುಖ್ಯವಾಗುತ್ತದೆ. ವ್ಯಕ್ತಿಯನ್ನು ನೋಡದೆ ಪಕ್ಷದ ಚಿಹ್ನೆಯನ್ನೇ ನೋಡಿ ಮತ ಹಾಕುವವರಿದ್ದರೆ ಅದು ದಕ್ಷಿಣ ಕನ್ನಡದಲ್ಲಿ ಮಾತ್ರ ಅನ್ನುವುದು ಸುಳ್ಳಲ್ಲ..!

ಬಿಜೆಪಿ ಶಕ್ತಿ ಮತ್ತು ದೌರ್ಬಲ್ಯವೇನು..?

ಹಿಂದುತ್ವದ ಅಜೆಂಡಾ ಮುಂದಿರಿಸಿಕೊಂಡು ಚುನಾವಣೆಗೆ ನಿಲ್ಲಲಿರುವ ಬಿಜೆಪಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ. ಕಮಲ ಪಾಳಯದಲ್ಲಿ ಯಾರೇ ನಿಂತರೂ ಗೆಲ್ಲಬಹುದಾದ ಸಾಧ್ಯತೆಗಳು ಹೆಚ್ಚಿರುತ್ತದೆ. ಹಾಗಂತ ಬಿಜೆಪಿ ಗೆಲುವು ನಮ್ಮದೇ ಅಂತ ಅತಿಯಾಗಿ ಬೀಗುವಂತಿಲ್ಲ. ಅತಿಯಾದ ಆತ್ಮವಿಶ್ವಾಸ ಎಚ್ಚರ ತಪ್ಪಿದ್ರೆ ಬಿಜೆಪಿಗೆ ಕಂಟಕವಾಗಬಹುದು. ಸದ್ಯ ಬಿಜೆಪಿಯಲ್ಲಿ ಅಭ್ಯರ್ಥಿಯಾಗಿ ಯಾರನ್ನು ನಿಲ್ಲಿಸೋದು ಅನ್ನುವುದೇ ದೊಡ್ಡ ಸವಾಲಾಗಿದೆ. ಹಾಲಿ ಸಂಸದ ನಳಿನ್ ಕುಮಾರ್ ಗೆ ಮತ್ತೆ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ನಿಂದ ಪರೋಕ್ಷ ಸಿಗ್ನಲ್ ಗಳು ಸಿಕ್ಕಿವೆಯಾದರೂ ಇದಕ್ಕೆ ಮತ್ತೊಂದು ಗುಂಪಿನಿಂದ ಭಾರಿ ವಿರೋಧ ಕೂಡ ವ್ಯಕ್ತವಾಗಿದೆ. ನಳಿನ್ ಅವಧಿಯಲ್ಲಿ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಲಾಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಸಂದರ್ಭದಲ್ಲಿ ಎದುರಾದ ಕಾರ್ಯಕರ್ತರ ಆಕ್ರೋಶ, ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಪೊಲೀಸರ ಲಾಠಿ ಏಟಿನ ಬಿಸಿ ಸೇರಿದಂತೆ ಹಲವು ವಿವಾದಗಳು ನಳಿನ್ ಅವರನ್ನು ಸುತ್ತುವರಿದಿದೆ. ಇದೆಲ್ಲವು ನಳಿನ್ ಗೆ ವಿರೋಧವಾಗಿರುವಾಗಲೇ ಹೈಕಮಾಂಡ್ ನಳಿನ್ ಪರವಾಗಿಯೇ ಬ್ಯಾಟಿಂಗ್ ಮಾಡಲಿದೆ ಅನ್ನುವ ವಿಚಾರಗಳು ಕೂಡ ಚರ್ಚೆಯಲ್ಲಿದೆ. ಮತ್ತೊಂದು ಕಡೆ ಬ್ರಿಜೇಶ್ ಚೌಟಾ, ಅರುಣ್ ಕುಮಾರ್ ಪುತ್ತಿಲ, ಸತ್ಯಜಿತ್ ಸುರತ್ಕಲ್ ಹೆಸರು ಕೂಡ ಲೋಕಸಭೆಗೆ ಕೇಳುತಿದೆಯಾದರೂ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ. ಹಾಗಿದ್ದರೆ ಲಿಸ್ಟ್ ನಲ್ಲಿ ಇಲ್ಲದ ಮತ್ತೊಬ್ಬ ಅಭ್ಯರ್ಥಿ ಹೆಸರನ್ನು ಬಿಜೆಪಿ ಘೋಷಿಸಬಹುದೇ..? ಈ ಉತ್ತರಕ್ಕೆ ಕಾಲವೇ ಉತ್ತರಿಸಬೇಕಿದೆ.

ಕಾಂಗ್ರೆಸ್ ಶಕ್ತಿ-ದೌರ್ಬಲ್ಯವೇನು..?

೧೯೯೧ರಲ್ಲಿ ಕಾಂಗ್ರೆಸ್ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದು ಬಿಟ್ಟರೆ ಅಲ್ಲಿಂದ ನಂತರ ಕೈ ಪಾಳಯಕ್ಕೆ ಗೆಲುವು ಮರಿಚೀಕೆಯಾಗಿಯೇ ಉಳಿದಿದೆ. ಅಂದು ಕಾಂಗ್ರೆಸ್ ಪರ ಜನಾರ್ದನ ಪೂಜಾರಿ ಗೆಲುವುಗಳಿಸಿದ್ದರು. ಅಲ್ಲಿಂದ ನಂತರ ಇಲ್ಲಿ ತನಕ ಕೈ ಹಲವು ಸಲ ಮುಖಭಂಗ ಅನುಭವಿಸಿದೆ. ಈ ಹಿಂದಿನ ಸೋಲುಗಳನ್ನು ರಿವ್ಯೂ ಮಾಡಿದಾಗ ಕೈ ಪಾಳಯದವರಿಗೆ ಹೊಸದೊಂದು ದಾರಿ ಕಂಡಿದೆ. ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಒಬ್ಬ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಪ್ರಕಾರವಾಗಿ ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಬಲ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಲಿಸ್ಟ್ ನಲ್ಲಿ ಸುಳ್ಯದ ಕಿರಣ್ ಬುಡ್ಲೆಗುತ್ತು ಅವರ ಹೆಸರು ಮುನ್ನೆಲೆಯಲ್ಲಿದೆ. ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದರಿಂದ ಕಾಂಗ್ರೆಸ್ ಗೆ ಹಲವು ಲಾಭಗಳಿವೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಪುತ್ತಿಲ, ಸತ್ಯಜಿತ್ ಸುರತ್ಕಲ್ ಬಂಡಾಯ ಅಭ್ಯರ್ಥಿಗಳಾಗಿ ಬಿಜೆಪಿಗೆ ಸೆಡ್ಡು ಹೊಡೆದು ನಿಂತರೆ ಬಿಜೆಪಿಯ ಮತಗಳು ವಿಭಾಗವಾಗುತ್ತದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ನೆಲ್ಯಾಡಿ ಸೇರಿದಂತೆ ಹಲವು ಕಡೆ ಒಕ್ಕಲಿಗ ಸಮುದಾಯ ಪ್ರಬಲವಾಗಿರುವುದರಿಂದ ಆ ಎಲ್ಲ ಮತಗಳು ತಾವು ನಿಲ್ಲಿಸಿದ ಅಭ್ಯರ್ಥಿಗೆ ಹೋಗಬಹುದು, ಗೆಲುವು ಸುಲಭವಾಗಬಹುದು ಅನ್ನುವ ಲೆಕ್ಕಾಚಾರ ಇದೆ. ಇನ್ನು ವಿನಯ್ ಕುಮಾರ್ ಸೊರಕೆ ಅವರ ಹೆಸರು ಕೇಳಿ ಬರುತ್ತಿದೆಯಾದರೂ ಹಿರಿಯರ ಬದಲು ಕಿರಿಯರಿಗೆ ಮಣೆ ಹಾಕುವುದಕ್ಕೆ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

Related posts

ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನದ ಆಚರಣೆ

ಪುತ್ತೂರಿನಲ್ಲಿ ಬೆಂಕಿ ದುರಂತ, ಬೆಂಕಿ ನಂದಿಸಲು ಜನರ ಪರದಾಟ

ಮೂರು ಇಂಚು ಎತ್ತರವಾಗಲು 12 ಕೋಟಿ ರು. ವೆಚ್ಚ ಮಾಡಿದ ಭೂಪ..!