ನ್ಯೂಸ್ ನಾಟೌಟ್: 12 ದಿನಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಮಂಗಳೂರಿನ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿ ತಿಳಿಸಿದೆ. ಇದೀಗ ಪೊಲೀಸರು ಆತನನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ.
ಕಳೆದ 12 ದಿನಗಳಿಂದ ದಿಗಂತ್ ನ ಪತ್ತೆಗಾಗಿ ಪೊಲೀಸರ ತಂಡ ವಿವಿಧ ರೀತಿಯ ಕಾರ್ಯಚರಣೆಗಳನ್ನು ನಡೆಸಿತ್ತು. ಪೊಲೀಸರು ನಿನ್ನೆ ಬೆಳಿಗ್ಗೆ 7 ಗಂಟೆಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆದ್ದರು. ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ.ನ ಭಾಗದಲ್ಲಿ ಹುಡುಕಾಟ ಮಾಡಲು ಯೋಜನೆ ತಯಾರಿಸಿ ಕಾರ್ಯ ಆರಂಭಿಸಿತ್ತು.
40ಕ್ಕೂ ಅಧಿಕ ಪೊಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿಎಆರ್ ತಂಡದ 30 ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹುಡುಕಾಟ ನಡೆಸಿದ್ದರು.
ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಫೆ. 25ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದ ದಿಗಂತ್, ದೇವಸ್ಥಾನಕ್ಕೆ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದ. ಬಳಿಕ ಹುಡುಕಾಡಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ರೈಲ್ವೇ ಹಳಿ ಬಳಿ ಪತ್ತೆಯಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸ್ಥಳೀಯ ರಾಜಕೀಯ ಮುಖಂಡರು, ಸ್ಥಳೀಯ ನಿವಾಸಿಗಳು ಮತ್ತು ಕುಟುಂಬಸ್ಥರ ತೀವ್ರ ಹುಡುಕಾಟದ ಬಳಿಕ ಪ್ರತಿಭಟನೆ ನಡೆಸಲಾಗಿತ್ತು.