ಮಂಗಳೂರು : ಬೈಕಂಪಾಡಿಯ ಕರ್ಕೇರ ಮೂಲಸ್ಥಾನ ಜಾರಂದಾಯ ದೈವಸ್ಥಾನ ಮತ್ತು ನಾಗಬ್ರಹ್ಮ ಪೀಠಕ್ಕೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ವರದಿಯಾಗಿದೆ. ದೈವಸ್ಥಾನದ ಬಾಗಿಲು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಕಳವಿಗೆ ಯತ್ನಿಸಿದ್ದಾರೆ. ಕಾಣಿಕೆ ಡಬ್ಬಿ ಒಡೆದು ಹಣ ಇದೆಯೇ ಎಂದು ತಡಕಾಡಿದ್ದಾರೆ. ಅಲ್ಲದೆ, ದೈವಸ್ಥಾನದ ಅಂಗಣದಲ್ಲಿದ್ದ ನಂದಿ ವಿಗ್ರಹ ಮತ್ತು ನಾಗನ ಕಲ್ಲಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಒಳಗಿದ್ದ ಇನ್ನಿತರ ವಸ್ತುಗಳನ್ನು ಹೊರಗೆ ಎಸೆದು ಜಾಲಾಡಿದ್ದಾರೆ. ಧಾರ್ಮಿಕ ಕೇಂದ್ರವನ್ನು ಅಪವಿತ್ರಗೊಳಿಸುವ ಉದ್ದೇಶದಿಂದಲೇ ಹಾನಿ ಮಾಡಿರುವಂತೆ ಮೇಲ್ನೋಟಕೆ ಕಂಡುಬಂದಿದೆ. ಇಂದು ಬೆಳಗ್ಗೆ ಸ್ಥಳೀಯ ಭಕ್ತರು ಕೃತ್ಯ ಗಮನಿಸಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.