ನ್ಯೂಸ್ ನಾಟೌಟ್ : ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೋಟ್ ಒಂದು ಸಂಪೂರ್ಣವಾಗಿ ಭಸ್ಮವಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.ಇಂದು ಮುಂಜಾನೆ(ಅ.10) 4.30 ಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಇಂದು ಮುಂಜಾನೆ ವೇಳೆಗೆ ಬೋಟ್‌ನ ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಏಕಾಏಕಿ ಕಾಣಿಸಿಕೊಂಡಿದೆ.ಇದರಿಂದಾಗಿ ಕೋಟ್ಯಂತರ ರೂ. ಮೌಲ್ಯದ ವಸ್ತು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ. ಬಂದರಿನಲ್ಲಿ ಲಂಗರು ಹಾಕಿರುವ ಇನ್ನಷ್ಟು ಬೋಟ್ ಗಳಿಗೆ ಬೆಂಕಿ ಹರಡುವ ಮುನ್ಸೂಚನೆ ದೊರೆತ ಹಿನ್ನಲೆಯಲ್ಲಿ ಸ್ಥಳೀಯರು ಬೆಂಕಿ ತಗುಲಿದ ಬೋಟನ್ನು ಬಂದರಿನಿಂದ ನದಿ ಕಡೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಇದರಿಂದಾಗಿ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅರುಣ್ ಎಂಬವರು ಈ ಬೋಟನ್ನು ನಡೆಸುತ್ತಿದ್ದು, ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.
