ನ್ಯೂಸ್ ನಾಟೌಟ್: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸನ್ಯಾಸಿಯ ವೇಷ ಧರಿಸಿ ಅಸಂಖ್ಯಾತ ಭಕ್ತರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ನಿತೀಶ್ ಕುಮಾರ್ ದುಬೆ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಂಧಿತ ನಿತೀಶ್ ಕುಮಾರ್ ದುಬೆ ಬಾಲಕಿಯೊಬ್ಬಳಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾನೆ. ಈತ ಕುಂಭಮೇಳದಲ್ಲಿ ಸನ್ಯಾಸಿ ವೇಷ ಧರಿಸಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ, ಮತ್ತು ಅಲ್ಲೂ ಹಲವರಿಗೆ ಸನ್ಯಾಸಿ ಎಂದು ನಂಬಿಸಿ ಮೋಸ ಮಾಡಿದ್ದ ಎನ್ನಲಾಗಿದೆ. ಜನವರಿ 31 ರಂದು ದಾಖಲಾದ ಬಾಲಕಿಯ ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭಿಸಿದಾಗ ನಿತೀಶ್ ದುಬೆ ಆರೋಪಿ ಎಂದು ಗೊತ್ತಾಗಿತ್ತು. ಈತ ಬಾಲಕಿಗೆ ಲೈಂಗಿಕ ಕಿರುಕುಳವನ್ನೂ ನೀಡಿದ್ದ. ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಗ್ರಾಮೀಣ ಎಸ್‌ಪಿ ಪ್ರಮೋದ್ ಕುಮಾರ್ ಸಿನ್ಹಾ ಆರೋಪಿ ದುಬೆಯ ಬಂಧನಕ್ಕೆ 10 ಸಾವಿರ ರೂ. ಬಹುಮಾನವನ್ನೂ ಘೋಷಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರ ವಿಶೇಷ ತಂಡ ಆರೋಪಿ ಬಂಧನಕ್ಕೆ ಮೊದಲು ಬಿಹಾರದಲ್ಲಿರುವ ಆತನ ಹಳ್ಳಿಗೆ ಹೋಗಿತ್ತು. ಆಗ ಆತ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪರಾರಿಯಾಗಿರುವುದು ತಿಳಿದು ಬಂತು. ಕೊನೆಗೆ ಪೊಲೀಸರು ಕುಂಭಮೇಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ದುಬೆ, ಸನ್ಯಾಸಿಯ ವೇಷ ಧರಿಸಿ ಜನರ ನಡುವೆ ವಾಸಿಸುತ್ತಿರುವುದು ಖಚಿತವಾಗಿದೆ.
ಹೀಗಾಗಿ ಆರೋಪಿ ಬಂಧನಕ್ಕೆ ಪೊಲೀಸರು ಕೂಡ ಸನ್ಯಾಸಿಗಳ ವೇಷ ಧರಿಸಿದರು. ಅಷ್ಟರಲ್ಲಿ ಆರೋಪಿ ಸನ್ಯಾಸಿ ವೇಷ ಕಳಚಿ ತನ್ನ ಊರಿಗೆ ಹಿಂತಿರುಗಲು ಮುಂದಾಗಿದ್ದಾನೆ. ಇದನ್ನರಿತ ಪೊಲೀಸರು ಆತನನ್ನು ಅಲಿಪುರದವರೆಗೆ ಹಿಂಬಾಲಿಸಿ, ಮನೆಯಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ವಿಚಾರಣೆ ಪೂರ್ಣಗೊಳಿಸಿರುವ ಪೊಲೀಸರು ನಾಳೆ (ಫೆ.17) ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿ ನಿತೀಶ್ ಕುಮಾರ್ ದುಬೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ. ಬಾಲಕಿ ಆತ್ಮಹತ್ಯೆ ಮಾಡಿಕೊಂಡ ನಂತರ ದುಬೆ ತಲೆಮರೆಸಿಕೊಂಡಿದ್ದ.