ನ್ಯೂಸ್ ನಾಟೌಟ್: ಉದ್ಯೋಗಕ್ಕೆಂದು ದಕ್ಷಿಣ ಅಮೆರಿಕದ ಗಯಾನಾಕ್ಕೆ (Guyana) ತೆರಳಿದ್ದ ಕೊಡಗಿನ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಪಿ.ಪಿ ಗಿರೀಶ್ ಕಳೆದ ಎರಡೂವರೆ ವರ್ಷಗಳಿಂದ ಗಯಾನಾದ ಜಾರ್ಜ್ ಟೌನ್‌ನ ಪನಾಮ (Panama) ಎಂಬಲ್ಲಿ ಖಾಸಗಿ ಆರೋಗ್ಯ ಸಂಸ್ಥೆಯೊಂದರಲ್ಲಿ ನರ್ಸಿಂಗ್ ಉದ್ಯೋಗಿಯಾಗಿದ್ದಾರೆ. ಜುಲೈ 3ರಂದು ಇದ್ದಕ್ಕಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೃದಯದ ಸಮಸ್ಯೆ, ಪಾರ್ಶವಾಯು ಕಾಣಿಸಿಕೊಂಡು ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಸದ್ಯ ಕೋಮ ಸ್ಥಿತಿಯಲ್ಲಿರುವ ಅವರಿಗೆ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಗಿರೀಶ್ ಕುಟುಂಬದವರು ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ಇತ್ತ ಭಾರತಕ್ಕೂ ಕರೆಸಿಕೊಳ್ಳಲಾಗದೆ, ಅಲ್ಲಿಯೂ ಹೋಗಿ ನೋಡಿಕೊಳ್ಳಲೂ ಸಾಧ್ಯವಿಲ್ಲದೆ ಅವರ ಕುಟುಂಬದವರು ಪರಿತಪಿಸುವಂತಾಗಿದೆ. ಗಿರೀಶ್ ಅವರ ಕುಟುಂಬದಲ್ಲಿ ಯಾರಿಗೂ ಪಾಸ್‌ಪೋರ್ಟ್ ಇಲ್ಲ. 4 ವರ್ಷದ ಹಿಂದೆ ಗಿರೀಶ್ ಅವರನ್ನು ವಿವಾಹವಾಗಿರುವ ಪತ್ನಿ ಜಾನಕಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ 2 ವರ್ಷದ ಮಗುವಿನೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ.
ಕೊಡಗು ಜಿಲ್ಲಾಡಳಿತದಲ್ಲಿ ವಿಪತ್ತು ನಿರ್ವಹಣಾಧಿಕಾರಿಯಾಗಿರುವ ಅನನ್ಯ ವಾಸುದೇವ್ ಅವರು ಈ ಹಿಂದೆ ವಿದೇಶಗಳಲ್ಲಿ ಸಿಲುಕಿರುವ ಅನೇಕರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದು, ಗಿರೀಶ್ ಸಂಬಂಧಿಕರು ಸಂಪರ್ಕಿಸಿದ್ದಾರೆ. ಜಾನಕಿ ಅವರನ್ನು ಅಮೆರಿಕಕ್ಕೆ ಕಳುಹಿಸುವುದು ಅಥವಾ ಗಿರೀಶ್ ಅವರನ್ನು ಅಲ್ಲಿಂದ ಏರ್ ಲಿಫ್ಟ್ ಮಾಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗಿರೀಶ್ ಪತ್ನಿಗೆ ತಾತ್ಕಾಲ್ ಪಾಸ್‌ಪೋರ್ಟ್ ಮಾಡಿಸಿದರೂ ಪ್ರಕ್ರಿಯೆಗಳೆಲ್ಲ ಮುಗಿಸಿ ಅಲ್ಲಿಗೆ ತೆರಳಲು 4-5 ದಿನಗಳು ಬೇಕು ಎನ್ನಲಾಗಿದೆ.