ಕರಾವಳಿಕೃಷಿ ಸಂಪತ್ತು

ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

351

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕೃಷಿಕರ ಸಮಸ್ಯೆಗಳಲ್ಲಿ ಕೂಲಿಯಾಳುಗಳ ಸಮಸ್ಯೆಯು ಒಂದು. ಯುವ ಜನರು ನಗರದ ಕಡೆ ಮುಖ ಮಾಡುತ್ತಿರುವ ಈ ಸಮಯದಲ್ಲಿ ಕೂಲಿಯಾಳುಗಳ ಬದಲಿಗೆ ಸೂಕ್ತ ತಂತ್ರಜ್ಞಾನದ ಅವಶ್ಯಕತೆಯೂ ಹೆಚ್ಚಿದೆ. ಆ ಅವಶ್ಯಕತೆಯನ್ನರಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಮಾನ್ಯ ಕೃಷಿಕರೊಬ್ಬರು ವಿಶೇಷ ಕೊಡುಗೆ ನೀಡಿದ್ದಾರೆ. ಇದೀಗ ಈ ಕೃಷಿಕ ತಯಾರಿಸಿದ ಮರವೇರುವ ಯಂತ್ರಕ್ಕೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ.

ಈ ಮರವೇರುವ ಯಂತ್ರವನ್ನು ಆವಿಷ್ಕರಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಮಲೆ ಗಣಪತಿ ಭಟ್ ಎನ್ನುವವರು. ಇವರು ತಯಾರಿಸಿದ ಈ ಯಂತ್ರಕ್ಕೆ ಇದೀಗ ಅಡಿಕೆ ಬೆಳೆಯನ್ನು ಅವಲಂಬಿಸಿದ ದಕ್ಷಿಣ ಭಾರತದ ಅನೇಕ ರೈತರಿಂದ ಬೇಡಿಕೆ ಹೆಚ್ಚಾಗುತ್ತಿದೆ.

ಜೊತೆಗೆ ಗಣಪತಿ ಭಟ್‌ ಮೊದಲು ಅಡಿಕೆ ಮರವನ್ನು ಏರುವ ಯಂತ್ರವನ್ನು ಆವಿಷ್ಕರಿಸಿದ್ದು, ಈಗ ಎಲ್ಲಾ ಮರವೇರುವ ವಿನೂತನ ಯಂತ್ರ ಅವಿಷ್ಕಾರ ಮಾಡಿರುವುದು ವಿಶೇಷವಾಗಿದೆ. ಈ ಯಂತ್ರದ ಮೂಲಕ ಯಾವುದೇ ಅಡೆತಡೆಯಿಲ್ಲದೇ ಮರದ ತುದಿಯನ್ನು ತಲುಪಬಹುದಾಗಿದೆ. ಈ ಯಂತ್ರ ಸುರಕ್ಷತೆಯಲ್ಲಿ ಅತ್ಯುತ್ತಮ ಎಂದು ಪ್ರಮಾಣಿತಗೊಂಡಿದ್ದು, ತೆಂಗು, ಅಡಿಕೆ, ಮಾವಿನ ಮರ, ಹಲಸಿನ ಮರ ಸೇರಿದಂತೆ ಎಲ್ಲಾ ಮರಗಳನ್ನು ಈ ಟ್ರೀ ಬೈಕ್ ಬಳಸಿ ಏರಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಯಂತ್ರಕ್ಕೆ ಒಂದು ಲೀಟರ್ ಪೆಟ್ರೋಲ್‌ ಹಾಕಿದರೆ 80 ಮರಗಳನ್ನು ಏರಬಹುದಾಗಿದೆ. 45 ಕೆಜಿ ಭಾರವಿರುವ ಟ್ರೀ ಬೈಕ್ ಅನ್ನು ಟ್ರಾಲಿ ಮೂಲಕ ಆರಾಮಾಗಿ ಕೊಂಡುಹೋಗಬಹುದಾಗಿದೆ. ತೆಂಗಿನ ಮರದಲ್ಲಿ ಈ ಯಂತ್ರದ ಮೇಲೆ ನಿಂತು ತೆಂಗಿನ ಕಾಯಿಗಳನ್ನು ಕೀಳಬಹುದಾಗಿದೆ. ಮರದಲ್ಲೇ ಯಂತ್ರ ಸುತ್ತಲೂ ತಿರುಗುತ್ತದೆ. ಸುರಕ್ಷತಾ ಗುಣಮಟ್ಟವನ್ನು ಹೊಂದಿರುವ ಈ ಯಂತ್ರದ ಪರೀಕ್ಷಾ ಪ್ರಯತ್ನವನ್ನು ಸ್ವತಃ ಮರದ ಮೇಲೆ ‌ನಿಂತು ಗಣಪತಿ ಭಟ್ ಅವರೇ ಮಾಡಿ ತೋರಿಸಿದ್ದಾರೆ.

ಸದ್ಯ ಈ ಯಂತ್ರಕ್ಕೆ ಕರ್ನಾಟಕ ಮಾರುಕಟ್ಟೆಯಲ್ಲಿ 1,55,000 ರೂಪಾಯಿ ದರವಿದೆ. ಕರ್ನಾಟಕ ಸರ್ಕಾರ ಈ ಯಂತ್ರ ಖರೀದಿಸುವ ರೈತರಿಗೆ 43 ಸಾವಿರ ರೂಪಾಯಿ ಸಬ್ಸಿಡಿಯನ್ನು ನೀಡಲಿದೆ. ಹೀಗಾಗಿ‌ ಈ ಯಂತ್ರ 1,12,000 ರೂಪಾಯಿ ಕೊಟ್ಟರೆ ಕೃಷಿಕರ ಕೈ ಸೇರಲಿದೆ. ಈ ಯಂತ್ರ ಬಳಸುವುದರಿಂದ ಕೆಲಸವೂ ಕ್ಷಿಪ್ರ ಗತಿಯಲ್ಲಿ ಮುಗಿಯುತ್ತದೆ ಎಂದು ಮಾರ್ಕೆಟಿಂಗ್ ಮಾಡುತ್ತಿರುವ ಇಂಜಿನಿಯರ್ ಶರ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ವಿಶೇಷವೆಂದರೆ ಒಬ್ಬ ಸಹಾಯಕನೊಂದಿಗೆ ಇಡೀ ತೋಟದ ಕೆಲಸವನ್ನು ಮಾಲೀಕನೇ ಮಾಡಬಹುದು ಅನ್ನುವುದು ಟ್ರೀ ಬೈಕ್ ಬಳಕೆದಾರರ ಅಭಿಪ್ರಾಯವಾಗಿದೆ. ಇಂತಹ ರೈತ ಸ್ನೇಹಿ ಕೊಡುಗೆ ನೀಡಿದ ಗಣಪತಿ ಭಟ್‌ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

See also  ಸಿನಿಮಾ ಚಿತ್ರೀಕರಣದ ವೇಳೆ ಲೈಟ್ ಮ್ಯಾನ್ ಮೃತ್ಯು..! ಯೋಗರಾಜ್ ಭಟ್ ವಿರುದ್ಧ ದೂರು ದಾಖಲು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget