ನ್ಯೂಸ್ ನಾಟೌಟ್ : ಕಂಟೈನರ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಕಂಟೈನರ್ ಮಗುಜಿ ಬಿದ್ದ ಘಟನೆ ಸುಳ್ಯದ ಶ್ರೀರಾಮ್ ಪೇಟೆಯಲ್ಲಿ ಶುಕ್ರವಾರ(ಮಾರ್ಚ್ 8) ನಡೆದಿದೆ.
ಜೀಪ್ ಮತ್ತು ಲಾರಿಯೊಂದಕ್ಕೆ ಕಂಟೈನರ್ ಲಾರಿ ಗುದ್ದಿದ ಪರಿಣಾಮವಾಗಿ ವಾಹನಗಳು ರಸ್ತೆ ಮಧ್ಯದಲ್ಲಿ ನಿಲ್ಲಿಸಲ್ಪಟ್ಟು ಶ್ರೀರಾಮ್ ಪೇಟೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಮುಖ್ಯ ರಸ್ತೆ ಬ್ಲಾಕ್ ಆಗಿದೆ. ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಶ್ರೀ ಸಾಯಿ ಲಾಗಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಸಂಸ್ಥೆಯ ಕಂಟೈನರ್ ಲಾರಿ ಸಿಮೆಂಟ್ ಲೋಡ್ ಲಾರಿಯೊಂದಕ್ಕೆ ಗುದ್ದಿತಲ್ಲದೆ ಜೀಪೊಂದಕ್ಕೆ ಕೂಡಾ ಗುದ್ದಿ ರಸ್ತೆ ಮಧ್ಯಭಾಗದಲ್ಲಿ ನಿಂತಿದೆ.
(ಕಂಟೈನರ್ ನಂ. KA 19AE4618, ಜೀಪ್ ನಂ. KL03C1892, ಸಿಮೆಂಟ್ ಲಾರಿ ನಂ. KA 21C0799) ಡಿಕ್ಕಿಯ ರಭಸಕ್ಕೆ ಕಂಟೈನರ್ ನಿಯಂತ್ರಣ ಕಳೆದುಕೊಂಡು ಮಗುಜಿ ಬಿದ್ದಿದ್ದು, ಹತ್ತಿರದ ಜೀಪ್ ಗೂ ಹಾನಿಯಾಗಿರುವುದಾಗಿ ಮಾಹಿತಿ ಲಭಿಸಿದೆ. ಕಿಲೋಮೀಟರ್ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಚಾಲಕನ ಅಜಾಗರುಕತೆಯಿಂದ ಘಟನೆ ಸಂಭವಿಸಿದೆ ಎಂದು ಸ್ಥಳಿಯರು ಅಭಿಪ್ರಾಯ ಪಟ್ಟಿದ್ದಾರೆ.
ಕ್ರೈನ್ ಸಹಾಯದಿಂದ ಕಂಟೈನರ್ ಅನ್ನು ತೆರವುಗೊಳಿಸಲಾಗಿದ್ದು, ಪ್ರಾಣ ಹಾನಿಯಾದ ಬಗ್ಗೆ ಮಾಹಿತಿ ಲಭಿಸಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಟ್ರಾಫಿಕ್ ತೆರವುಗೊಳಿಸಲು ಸಹಕರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.