ನ್ಯೂಸ್ ನಾಟೌಟ್ : ಕಾಯಕವೇ ಕೈಲಾಸವೆಂಬಂತೆ ದುಡಿಮೆಯ ಶ್ರೇಷ್ಠತೆಯನ್ನು, ಆರ್ಥಿಕ ಸ್ವಾವಲಂಬನೆಯನ್ನು, ಸರಳ ಜೀವನದ ಉನ್ನತ ಬದುಕು, ಉಳಿತಾಯ ಪ್ರವೃತ್ತಿ, ಸೇವಾ ಮನೋಭಾವದ ಸದ್ಗುಣಗಳನ್ನು ಅಳವಡಿಸಿಕೊಂಡಿದ್ದವರು ಡಾ. ಕುರುಂಜಿ ವೆಂಕಟರಮಣ ಗೌಡರು.
ಜನಸೇವೆ ಮತ್ತು ದಾನಧರ್ಮಗಳ ಹಿರಿಮೆಯನ್ನು ಅರಿತ ಕೆಲವು ಶ್ರೀಮಂತರು ತಮ್ಮ ಶ್ರೀಮಂತಿಕೆ ಏನಿದ್ದರೂ ದೇವರಿಂದ ಬಂದ ಕಾಣಿಕೆ. ತಾವು ಬದುಕಿ ಬಾಳುತ್ತಿರುವ ಸಮಾಜದ ಋಣವನ್ನು ತೀರಿಸುವ ಹೊಣೆಗಾರಿಕೆಯೂ ಇದೆ ಎಂದು ನಂಬಿ ನಡೆಯುವವರು ಕೆಲವರು. ಹೀಗೆ ಶ್ರೀಮಂತ ಸಂಪ್ರದಾಯವನ್ನು ತಮ್ಮದಾಗಿಸಿಕೊಂಡು ಪರೋಪರಕ್ಕಾಗಿಯೇ ತಮ್ಮ ಜೀವವನ್ನು, ಜೀವನವನ್ನು, ಐಶ್ವರ್ಯವನ್ನು, ಸಮಯವನ್ನು ಮತ್ತು ಬುದ್ಧಿಶಕ್ತಿಯನ್ನು ಮೀಸಲಿರಿಸಿ ಶಿಖರದೆತ್ತರಕ್ಕೆ ಬೆಳೆದ ವ್ಯಕ್ತಿತ್ವ ಪೂಜ್ಯ ಡಾ.ಕುರುಂಜಿ ವೆಂಕಟರಮಣಗೌಡರು.
ಶ್ರೀ ಕುರುಂಜಿಯವರನ್ನು ಆಧುನಿಕ ಸುಳ್ಯದ ನಿರ್ಮಾತೃ ಎಂದರೆ ಉತ್ಪ್ರೇಕ್ಷೆಯಿಲ್ಲ. ಭೂಪಟದಲ್ಲಿ ಸುಳ್ಯ ಗುರುತಿಸಲು ಕಾರಣಕರ್ತರಾದವರೇ ಪೂಜ್ಯ ಡಾ.ಕುರುಂಜಿಯವರು. 1950 ರ ದಶಕದಲ್ಲಿದ್ದ ಸುಳ್ಯ ಮತ್ತು 2020 ರ ದಶಕದಲ್ಲಿ ಈಗಿನ ಸುಳ್ಯವನ್ನು ನೋಡಿದವರ ಬಾಯಲ್ಲಿ ಬರುವುದು ಶಿಕ್ಷಣ ಕಾಶಿಯನ್ನಾಗಿಸಿದ ನಮ್ಮ ಕುರುಂಜಿ ವೆಂಕಟರಮಣ ಗೌಡರ ಹೆಸರು. .
ದೂರದೃಷ್ಟಿಯ ವ್ಯಕ್ತಿತ್ವದ ಕುರುಂಜಿಯವರು, ಪಟ್ಟಣವಾಗಲಿ, ಗ್ರಾಮವಾಗಲಿ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ಜನರಿಗೆ ವಿದ್ಯಾಭ್ಯಾಸ ದೊರೆಯಬೇಕು, ಎಂದು ನಂಬಿದವರು. ಇವರ ಇದೇ ಚಿಂತನೆ. ನಾಗರಿಕತೆಗೆ ಹೊಸತನಕ್ಕೆ, ಶಿಕ್ಷಣಕ್ಕೆ ಅಡಿಪಾಯವಾಯಿತು. ಶಿಕ್ಷಣದ ಮೂಲಕ ಸುಳ್ಯ ಭಾಗದ ಯುವಜನರ ಬಾಳನ್ನು ಸುಂದರವಾಗಿಸಲು ಸುಳ್ಯದಲ್ಲಿ “ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸ್ಥಾಪಕಾಧ್ಯಕ್ಷರಾಗಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಇಲ್ಲಿಂದಲೇ ಸುಳ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿತ್ತು.
ಮುಂದಿನ ಹೆಜ್ಜೆಯಾಗಿ, 1976ರಲ್ಲಿ ನೆಹರು ಮೆಮೋರಿಯಲ್ ಪದವಿ ಕಾಲೇಜನ್ನು ಆರಂಭಿಸಿದರು. ಭಾರತದ ಪ್ರಥಮ ಪ್ರಧಾನಿ ನೆಹರೂರವರ ಹೆಸರನ್ನೊಳಗೊಂಡ ಕಾಲೇಜು ಸುಂದರವಾದ ಕಟ್ಟಡ. ಇಲ್ಲಿನ ವಿದ್ಯಾರ್ಥಿಗಳಿಗೆ ಬೇಕಾದ ಪೀಠೋಪಕರಣಗಳು, ಗ್ರಂಥಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗೌಡರು ಶ್ರಮಪಟ್ಟರಲ್ಲದೆ, ಸುಳ್ಯ ಮತ್ತು ಆಸುಪಾಸಿನ ಪ್ರದೇಶಗಳಾದ ಕೊಡಗಿನ ಮಡಿಕೇರಿ, ಸೋಮವಾರಪೇಟೆ, ಕಾಸರಗೋಡಿನಿಂದ ಬರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಿದರು.
ಕ್ರಿಯಾಶೀಲರಾಗಿರುವಂತಹವರನ್ನು ಪ್ರಾಂಶುಪಾಲರಾಗಿ ಮತ್ತು ಉಪನ್ಯಾಸಕರಾಗಿ ನೇಮಿಸುವಲ್ಲಿ ಯಶಸ್ವಿಯಾದರು. ಸುಮಾರು 48 ವಸಂತಗಳನ್ನು ಕಂಡು ಸುವರ್ಣ ಸಂಭ್ರಮದತ್ತ ಕಾಲಿಡುತ್ತಿರುವ ನೆಹರೂ ಮೆಮೋರಿಯಲ್ ಕಾಲೇಜು, ಇಂದು ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳಲ್ಲಿ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಮೊದಲು ಆರಂಭವಾದ ನೆಹರು ಮೆಮೋರಿಯಲ್ ಕಾಲೇಜು, ಕೆ.ವಿ.ಜಿ ವಿದ್ಯಾಸಂಸ್ಥೆಗಳಿಗೆ ಮಾತೃ ಸಂಸ್ಥೆ. ಇಲ್ಲಿ 2015 ರಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿ ನೇಮಕಗೊಂಡು 2021 ರಿಂದ ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸುತ್ತಿರುವುದು ನನ್ನ ಭಾಗ್ಯವೇ ಸರಿ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಪ್ರೊ-ಕಬಡ್ಡಿ ಲೀಗ್‌ನಲ್ಲಿ ನಮ್ಮ ಕಾಲೇಜಿನ ಪ್ರತಿಭೆ ಭಾಗವಹಿಸುವಂತೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಶೈಕ್ಷಣಿಕವಾಗಿ ಹಲವಾರು ರ‍್ಯಾಂಕ್‌ಗಳನ್ನು ಗಳಿಸುವಲ್ಲಿಯೂ ನಮ್ಮ ಕಾಲೇಜು ಯಶಸ್ವಿಯಾಗಿದೆ. ಇದಕ್ಕೆಲ್ಲಾ ಕಾರಣ ನೆಹರೂ ಮೆಮೋರಿಯಲ್ ಕಾಲೇಜನ್ನು ಸ್ಥಾಪಿಸಿದ ಡಾ. ಕುರುಂಜಿ ವೆಂಕಟರಮಣ ಗೌಡರ ದೂರದೃಷ್ಟಿ. ಗೌಡರ ಮಕ್ಕಳು, ಮೊಮ್ಮಕ್ಕಳು ಈ ಹಾದಿಯಲ್ಲಿ ಸಹಕಾರ ನೀಡುತ್ತಿದ್ದಾರೆ.
ಪದವಿ ಕಾಲೇಜು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿಹಾಡಿದ ಗೌಡರು, ಬಳಿಕ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. 1978ರಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, 1986ರಲ್ಲಿ ಐಟಿಐ ಮತ್ತು ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣ ಕಾಲೇಜು, ಬಳಿಕ ಡೆಂಟಲ್ ಕಾಲೇಜನ್ನು ಸ್ಥಾಪಿಸಿದರು. ತಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿ ಅವರೂ ಸುಳ್ಯದ ಗ್ರಾಮೀಣ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. ಮೆಡಿಕಲ್ ಕಾಲೇಜು ಮತ್ತು ಸಾರ್ವಜನಿಕ ಆಸ್ಪತ್ರೆಯನ್ನು ಕುರುಂಜಿಯವರ ಹಿರಿಯ ಪುತ್ರ, ಹಸನ್ಮುಖಿ ಡಾ.ಕೆ.ವಿ. ಚಿದಾನಂದರವರ ಸ್ಥಾಪಿಸಿ ಸುಳ್ಯದ ಜನತೆಗೆ ಆರೋಗ್ಯ ಸೇವೆ ನೀಡುವಲ್ಲಿ ಯಶಸ್ವಿಯಾದರು. ಹಲವು ಸಂಧರ್ಭಗಳಲ್ಲಿ ನಮ್ಮ ಪ್ರಸ್ತುತ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷರಾಗಿರುವ ಡಾ.ಕೆ.ವಿ. ಚಿದಾನಂದರ ಜೊತೆ ನಮ್ಮ ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗವಹಹಿಸುವಾಗ, ವಾಹನ ಸಂಚಾರವಿಲ್ಲದ ಎಷ್ಟೋ ಸ್ಥಳಗಳಿಗೆ ಹಗಲು ರಾತ್ರಿ ಎನ್ನದೆ ನಡೆದುಕೊಂಡು, ಹೊಳೆ ದಾಟಿಕೊಂಡು, ಕಾಡಿನ ರಸ್ತೆಯಲ್ಲಿ ಹೋಗಿ ಚಿಕಿತ್ಸೆ ನೀಡಿಬಂದ ವಿಚಾರವನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದರು. ತಮ್ಮ ತಂದೆಯವರ ಆಸೆಯಂತೆ ಗ್ರಾಮೀಣ ಪ್ರದೇಶದ ಜನರ ಸೇವೆಗೆ ಸದಾ ಸಿದ್ಧರಾಗಿರುವುದಾಗಿ ಹೇಳುವ ಡಾ.ಕೆ.ವಿ.ಚಿದಾನಂದರವರು, ತಮ್ಮ ತಂದೆಯ ಬಗ್ಗೆ ಇರುವ ಅಭಿಮಾನ, ಕರ್ತವ್ಯ ಪಾಲನೆಯ ಕುರಿತ ಜಾಗೃತಿ ಮುಂದಿನ ಪೀಳಿಗೆಗೂ ಆದರ್ಶ.
ಪದವಿ ಕಾಲೇಜಿನಿಂದ ಮೊದಲ್ಗೊಂಡು ಪದವಿಪೂರ್ವ ಕಾಲೇಜು, ಐಟಿಐ, ಪಾಲಿಟೆಕ್ನಿಕ್, ಡೆಂಟಲ್ ಕಾಲೇಜು, ಮೆಡಿಕಲ್ ಕಾಲೇಜು, ಆಯುರ್ವೇದ ಕಾಲೇಜು, ಕಾನೂನು ಕಾಲೇಜು, ನರ್ಸಿಂಗ್ ಕಾಲೇಜು, ಕೆ.ಜಿ ಯಿಂದ ಪಿ.ಜಿ ವರೆಗೆ ತಾಂತ್ರಿಕ, ವೈದ್ಯಕೀಯ, ಕಾನೂನು ಒಳಗೊಂಡ ಹಲವಾರು ವಿದ್ಯಾಸಂಸ್ಥೆಗಳನ್ನು ಬೆಳೆಸುವಲ್ಲಿ ಡಾ. ಕುರುಂಜಿ ವೆಂಕಟರಮಣ ಗೌಡರು ಯಶಸ್ಸು ಕಂಡಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆ ಎನ್ನುವಂತೆ, ನಮ್ಮ ಸುಳ್ಯವನ್ನು ಶಿಕ್ಷಣ ಕಾಶಿಯನ್ನಾಗಿಸಿದ ಅಮರಶಿಲ್ಪಿ, ಸುಳ್ಯದ ನಿರ್ಮಾತೃ ಪೂಜ್ಯ ಡಾ.ಕುರುಂಜಿ ವೆಂಕಟರಮಣ ಗೌಡರು.
ಕಲೆ, ಸಂಸ್ಕೃತಿಯ ದೃಷ್ಟಿಯಿಂದ ಕುರುಂಜಿಯವರ ಆಸಕ್ತಿ ಅಪಾರವಾದುದು. ಯಕ್ಷಗಾನ, ನಾಟಕ, ಕ್ರೀಡೆಗಳು, ಭಜನೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಸುಸಂಸ್ಕೃತವಾಗಿ ಇರಬೇಕೆಂಬುದು ಕುರುಂಜಿಯವರ ಕಳಕಳಿ.