ನ್ಯೂಸ್ ನಾಟೌಟ್: ಪರೀಕ್ಷೆಯಲ್ಲಿ ಪಾಸ್ ಮಾಡಿಸುವಂತೆ ವಿದ್ಯಾರ್ಥಿಯೋರ್ವ ದೇವರಿಗೆ ಚೀಟಿ ಬರೆದಿದ್ದು,ಅದೀಗ ವೈರಲ್ ಆಗಿದೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿಯನ್ನು ಮಾಡಿದ್ದಾನೆ. ಇದೀಗ ಈ ಚೀಟಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿದ್ಯಾರ್ಥಿಯೋರ್ವ ಚೀಟಿ ಬರೆದು ದೈವಕ್ಕೆ ಕೋರಿಕೆಯಿಟ್ಟಿದ್ದಾನೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಪತ್ತೆಯಾಗಿದ್ದು ಕುತೂಹಲಕಾರಿಯಾಗಿದೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್ ಪಾಸ್ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್‌ಬುಕ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ಈ ಚೀಟಿ ಫೋಟೋದಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್- 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿ ಮಾಡಿರುವ ದೃಶ್ಯವನ್ನು ಕಾಣಬಹುದು. ಶೇರ್ ಮಾಡಲಾದ ಈ ಪೋಸ್ಟ್ ಗೆ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳ ಸುರಿಮಳೆಯೇ ಹರಿದು ಬರುತ್ತಿದೆ.
ಒಬ್ಬ ಬಳಕೆದಾರರು ʼಪಾಪಾ ಬಡಪಾಯಿ ವಿದ್ಯಾರ್ಥಿ, ತನಗೆ ಪಾಸ್ ಆಗುವಷ್ಟು ಅಂಕ ಬೇಕೆಂದು ದೇವರಲ್ಲಿ ನಂಬಿಕೆ ಇಟ್ಟು ಚೀಟಿ ಬರೆದಿದ್ದಾರೆ. ಇದರಲ್ಲಿ ತಪ್ಪೇನು, ಅವನ ಆಸೆ ಈಡೇರಲಿʼ ಎಂಬ ಕಾಮೆಂಟ್ ಮತ್ತೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವನಿಗೆ ದುರಾಸೆಯಿಲ್ಲ ಜಸ್ಟ್ ಪಾಸ್ ಮಾಡಿಸುವಂತೆ ಕೇಳಿಕೊಂಡಿದ್ದಾನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾನೆ.
View this post on Instagram