ನ್ಯೂಸ್ ನಾಟೌಟ್: ಪ್ರಯಾಣಿಕನಿಗೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ಸಹ ಪ್ರಯಾಣಿಕ ಪರಾರಿಯಾಗಿರುವ ಘಟನೆ ಶನಿವಾರ(ಫೆ.22) ಶಿರಸಿಯಲ್ಲಿ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಹ ಪ್ರಯಾಣಿಕ ಪತ್ನಿಯ ಎದುರಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಶಿರಸಿಯಿಂದ ಬೆಂಗಳೂರಿಗೆ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಈ ಘಟನೆ ನಡೆದಿದೆ. ಸಾಗರ ನಗರದ ಗಂಗಾಧರ್ ಚಾಕು ಇರಿತಕ್ಕೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಿರಸಿಯ ದುಂಡಸಿ ನಗರದ ಆರೋಪಿ ಪ್ರೀತಮ್ ಡಿಸೋಜಾ ಚಾಕು ಇರಿದು ಪರಾರಿಯಾಗಿದ್ದಾನೆ. ಗಂಗಾಧರ್ ಶಿರಸಿಯಲ್ಲಿನ ಪತ್ನಿಯ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪ್ರೀತಮ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಶುರುವಾಗಿದೆ. ಈ ಹಂತದಲ್ಲಿ ಜೇಬಿನಿಂದ ಚಾಕು ತೆಗೆದು ಗಂಗಾಧರ್ ಎದೆಗೆ ಚುಚ್ಚಿ ಪ್ರೀತಮ್ ಪರಾರಿಯಾಗಿದ್ದಾನೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿದ ಆರೋಪಿ ಶಿರಸಿ ನಗರ ಠಾಣಾ ಪೊಲೀಸರಿಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲಿಯೇ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪಿ ಪ್ರೀತಮ್ ಹಾಗೂ ಮೃತನ ಹೆಂಡತಿ ಪೂಜಾ ಹತ್ತು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು. ಶಿರಸಿ ನಿವಾಸಿಯಾಗಿದ್ದ 30 ವರ್ಷದ ಪೂಜಾ ಮನೆ ಬಿಟ್ಟು ಕೆಲ ಕಾಲ ಕೊಲೆ ಆರೋಪಿ ಪ್ರೀತಮ್ ಜೊತೆಯಲ್ಲೇ ಇದ್ದಳು ಎಂದು ವರದಿಯಾಗಿದೆ. ಆರೋಪಿ ಪ್ರೀತಮ್ ಗೆ ಬೇರೆ ಅಫೇರ್ ಇರೋದು ತಿಳಿದು ಅವನನ್ನು ಬಿಟ್ಟು ಕೆಲಸಕ್ಕೆ ಪೂಜಾ ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದಳು.
ಈ ವೇಳೆ ಬೆಂಗಳೂರಿನಲ್ಲಿ ಪೂಜಾ ಹಾಗೂ ಸಾಗರ ನಗರದ 35 ವರ್ಷದ ಗಂಗಾಧರ್ ಎನ್ನುವವರ ಜೊತೆ ಮದುವೆಯಾಗಿತ್ತು.ಕಳೆದ 7-8 ತಿಂಗಳ ಹಿಂದೆ ಮದುವೆಯಾಗಿದ್ದ ಪೂಜಾ ಹಾಗೂ ಗಂಗಾಧರ್ ಸುಖವಾಗಿ ಸಂಸಾರ ಮಾಡಿಕೊಂಡಿದ್ದರು. ಮೃತ ಗಂಗಾಧರ್ ಶಿರಸಿಯಲ್ಲಿನ ಅತ್ತಿಗೆ ಮನೆಗೆ ಮೊನ್ನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಂದು ಪತ್ನಿ ಜೊತೆ ಬೆಂಗಳೂರಿಗೆ ಶಿರಸಿಯಿಂದ ಹೊರಟಿದ್ದರು.ಅದೇ ಸಮಯಕ್ಕೆ ಚಾಕು ಹಿಡಿದು ಸಿದ್ಧವಾಗಿ ಬಸ್‌ನೊಳಗೆ ಗಂಗಾಧರ್ ಪಕ್ಕದಲ್ಲೇ ಬಂದು ಪ್ರೀತಮ್ ಕುಳಿತುಕೊಂಡಿದ್ದ. ಗಂಗಾಧರ್ ಪತ್ನಿ ವಿಚಾರಕ್ಕೋ ಅಥವಾ ಬೇರೆ ವಿಚಾರಕ್ಕೋ ಗಂಗಾಧರ್ ಹಾಗೂ ಆರೋಪಿ ಪ್ರೀತಮ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಜೇಬಿನಿಂದ ಚಾಕು ತೆಗೆದು ಗಂಗಾಧರ್ ಎದೆಗೆ ಚುಚ್ಚಿ ಆರೋಪಿ ಪ್ರೀತಮ್ ಪರಾರಿಯಾಗಿದ್ದ. ಆರೋಪಿ ಪ್ರೀತಮ್‌ನನ್ನು ಗಂಗಾಧರ್ ಪತ್ನಿ ಪೂಜಾಳೇ ಕರೆಯಿಸಿದ್ದಳೇ ? ಎಂಬ ಸಂಶಯ ಹೆಚ್ಚಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.