ಕರಾವಳಿಕ್ರೈಂ

ಚಾರ್ಮಾಡಿ: KSRTC ಬಸ್‌ಗಳ ಅಪಘಾತದ ಟ್ರಾಫಿಕ್‌ನಲ್ಲಿ ಹೆರಿಗೆ ನೋವಿನಿಂದ ಗಂಟೆಗಟ್ಟಲೆ ಒದ್ದಾಡಿದ ಗರ್ಭಿಣಿ..! ಆಂಬ್ಯುಲೆನ್ಸ್‌ ಚಾಲಕ ಆರೀಫ್‌ನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ..!

ನ್ಯೂಸ್ ನಾಟೌಟ್: ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ KSRTC ಬಸ್‌ಗಳ ನಡುವಿನ ಅಪಘಾತದ ಸಂದರ್ಭದಲ್ಲಿ ಉಂಟಾದ ಟ್ರಾಫಿಕ್ ಜಾಮ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಗಂಟೆಗಟ್ಟಲೆ ಒದ್ದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಲೇ ಆಂಬ್ಯುಲೆನ್ಸ್‌ ಚಾಲಕ ಆರೀಫ್‌ ಅನ್ನುವವರು ವಾಹನ ದಟ್ಟಣೆಯ ನಡುವೆಯೂ ತನ್ನ ಪ್ರಾಣದ ಹಂಗನ್ನು ತೊರೆದು ಸುರಕ್ಷಿತವಾಗಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಜೀವವನ್ನು ರಕ್ಷಿಸಿದ್ದಾರೆ. ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಹಿಂದೂ-ಮುಸ್ಲಿಂ ಧರ್ಮದ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಈ ಸೇಡಿನ ಕಿಡಿಯಲ್ಲಿ ಅನೇಕ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಆರೀಫ್ ಮತ್ತೊಂದು ಧರ್ಮದ ಎರಡು ಜೀವವನ್ನು ರಕ್ಷಿಸುವುದಕ್ಕೆ ತೆಗೆದುಕೊಂಡ ದಿಟ್ಟ ನಿರ್ಧಾರ ಹಾಗೂ ಸಮಯ ಪ್ರಜ್ಞೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ KSRTC ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಈ ಘಟನೆಯ ಬಳಿಕ ರಸ್ತೆಯ ಎರಡೂ ಕಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಖಾಸಗಿ ವಾಹನದಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ತುಂಬು ಗರ್ಭಿಣಿ ಚೈತ್ರಾ ಅನ್ನುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರು ಕುಳಿತಿದ್ದ ವಾಹನದ ಹಿಂದಕ್ಕೂ ಹಾಗೂ ಮುಂದಕ್ಕೂ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಮುಂದಕ್ಕೆ ಹೋಗುವುದಕ್ಕೆ ಸಾಧ್ಯವೇ ಆಗಿರುವುದಿಲ್ಲ. ಆಸ್ಪತ್ರೆಗೆ ಹೋಗುವುದಕ್ಕೆ ಸಾಧ್ಯವಾಗದೆ ಹೆರಿಗೆ ನೋವಿನಿಂದ ಚೈತ್ರಾ ಒದ್ದಾಟ ನಡೆಸುತ್ತಿದ್ದರು.

ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ಆಂಬ್ಯುಲೆನ್ಸ್‌ ಚಾಲಕ ಮೊಹಮ್ಮದ್ ಆರೀಫ್ ಗಮನಿಸಿದ್ದಾರೆ.
ಇವರ ಗಮನಕ್ಕೆ ಬರುತ್ತಿದ್ದಂತೆ ಅವರು ತಮ್ಮ ಆಂಬ್ಯುಲೆನ್ಸ್‌ ನಲ್ಲಿ ಚೈತ್ರಾ ಅವರನ್ನು ಕರೆದುಕೊಂಡು ಮುಂದೆ ಸಾಗಿದ್ದರು. ಟ್ರಾಫಿಕ್ ಅನ್ನು ಲೆಕ್ಕಿಸದೆ ಜೋರಾಗಿ ಸೈರನ್ ಹಾಕುತ್ತಾ ಹೇಗೋ ದಾರಿ ಮಾಡಿಕೊಂಡು ಮೂಡಿಗೆರೆಯ ಆಸ್ಪತ್ರೆಗೆ ಕರೆ ತಂದರು.

ಸಮಯಕ್ಕೆ ಸರಿಯಾಗಿ ಕರೆದುಕೊಂಡು ಬಂದಿದ್ದರಿಂದ ಜೀವ ಉಳಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೀಫ್‌ ಅವರಿಗೆ ಚೈತ್ರಾ ಅವರ ಕುಟುಂಬದವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Related posts

ತಡರಾತ್ರಿ ಬೃಹತ್ ಹೆಬ್ಬಾವು ಸೆರೆ

ನಾಳೆ ಮಂಗಳೂರಿಗೆ ಪ್ರಿಯಾಂಕ ಗಾಂಧಿ ಆಗಮನ,ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಕಾರ್ಕಳ : ಮನೆಮನೆಗೂ ನೀರು ಹರಿಸಿದ ಆಧುನಿಕ ಭಗೀರಥ; 1500 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ