ಕರಾವಳಿಕ್ರೈಂಪುತ್ತೂರುಸುಳ್ಯ

ಕೊಂಬಾರು ಆನೆ ಸ್ಥಳಾಂತರ ಸಂದರ್ಭ ಘರ್ಷಣೆ; ಏಳು ಮಂದಿಯ ಬಂಧನ

376

ನ್ಯೂಸ್‌ನಾಟೌಟ್‌: ಕಡಬ ತಾಲೂಕಿನ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ನರಹಂತಕ ಕಾಡಾನೆಯನ್ನು ಸೆರೆ ಹಿಡಿದು ಗುರುವಾರ ರಾತ್ರಿ ಸ್ಥಳಾಂತರಿಸುವ ಸಂದರ್ಭ ಉಂಟಾದ ಘರ್ಷಣೆಯಿಂದ ಅರಣ್ಯ ಮತ್ತು ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಸೆರೆ ಸಿಕ್ಕ ಕಾಡಾನೆಯನ್ನು ಗುರುವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಆನೆ ಶಿಬಿರಕ್ಕೆ ಕೊಂಡೊಯ್ಯಲು ಮುಂದಾದಾಗ ಸ್ಥಳದಲ್ಲಿದ್ದ ಕೆಲವರು ಸ್ಥಳಕ್ಕೆ ಬಂದು ಕಾಡಾನೆ ತುಂಬಿಸಿದ ಲಾರಿಯನ್ನು ತಡೆದು ನಿಲ್ಲಿಸಿ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆ ಹಿಡಿದು ಒಟ್ಟಿಗೆ ಎಲ್ಲ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ವಾಗ್ವಾದ ಮಾಡಿದ್ದರು.


ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಆದ ಕಾರಣ ಸೆರೆ ಹಿಡಿದ ಆನೆಯನ್ನು ಮೊದಲು ಆನೆ ಶಿಬಿರಕ್ಕೆ ಬಿಟ್ಟು ಬಂದು ಬಳಿಕ ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಭರವಸೆ ನೀಡಿದರು. ಆದರೂ ಕೇಳದ ಆಕ್ರೋಶಿತ ಜನರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಜನರಿಗೆ ತಿಳಿವಳಿಕೆ ಹೇಳಿದರೂ ಆಕ್ರೋಶಿತ ಜನರು ಮಾತ್ರ ಪೊಲೀಸರ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಈ ಸಂದರ್ಭ ಮಾತಿನ ಚಕಾಮಕಿ ಜೋರಾಗಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯ ಮೇಲೆ ಕೆಲವರು ಕಲ್ಲು ತೂರಾಟ ಮಾಡಿ ಸ್ಥಳದಲ್ಲಿದ್ದ ಇಲಾಖೆ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಗೂ ಗಾಯಗಳಾಗಿದೆ ಎಂದು ಪಂಜ ಉಪ ವಲಯ ಅರಣ್ಯ ಅಧಿಕಾರಿ ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಒಂದು ಆನೆಯನ್ನು ಹಿಡಿದು ಹೋದ ಅಧಿಕಾರಿಗಳು ಮತ್ತೆ ಕಾರ್ಯಾಚರಣೆ ಮುಂದುವರಿಸುವ ಭರವಸೆಯಿಲ್ಲ. ಇದರಿಂದ ಗುರುವಾರ‌ ಸಂಜೆ ಆನೆ ಹಿಡಿದ ಬಳಿಕದಿಂದಲೇ ಜನರು ಅಸಮಾಧಾನ ಹೊರ ಹಾಕಿದ್ದರು. ಅದರ ಜತೆಗಿದ್ದ ಇತರ ಆನೆಯನ್ನೂ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಮೊನ್ನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಇಲ್ಲಿನ ಪರಿಸರದ ಜನರು ನಿತ್ಯ ಭಯದಿಂದಲೇ ಜೀವನ ಸಾಗಿಸಬೇಕಾಗಿದೆ. ಈ ಪರಿಸರದ ಪ್ರತಿಯೊಂದು ಮನೆಯ ಮಂದಿಗೆ ಈಗ ಆನೆ ದಾಳಿಯದ್ದೇ ಆತಂಕ. ಈ ನಡುವೆ ಕಾರ್ಯಾಚರಣೆಗೆ ಮೈಸೂರು ದುಬಾರೆಯಿಂದ ತಂದ ಐದು ಸಾಕಾನೆಗಳನ್ನೂ ಲಾರಿಯಲ್ಲಿ ಹೇರಿಕೊಂಡು ಮೈಸೂರಿಗೆ ಸಾಗಿಸಲಾಗಿದೆ ಎಂಬ ಮಾತು ಶುಕ್ರವಾರ ಕೇಳಿಬಂದಿದೆ.

See also  ಸುಳ್ಯ:'ಮೇರಾ ಪೆಹೆಲಾ ವೋಟ್ ದೇಶ್ ಕೇ ಲಿಯೇ' ಕುರಿತು ಉಪನ್ಯಾಸ ಕಾರ್ಯಕ್ರಮ; ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಡಿಟೇಲ್ಸ್‌ ಇಲ್ಲಿದೆ ನೋಡಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget