ನ್ಯೂಸ್ ನಾಟೌಟ್: ಎರಡು ಜೀವಗಳನ್ನ ಬಲಿ ಪಡೆದು, ಇಡೀ ಗ್ರಾಮದ ಜನರಿಗೆ ಭಯ ತರಿಸಿದ್ದ ಒಂಟಿ ಸಲಗವನ್ನ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಚೆನ್ನಂಗೊಲ್ಲಿ, ಭದ್ರಗೊಳ, ದೇವರಪುರ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಡ್ಡಾಡುತ್ತಿದ್ದ ಪುಂಡ ಕಾಡಾನೆ ಸುತ್ತಮುತ್ತಲಿನ ಗ್ರಾಮದ ಜನರನ್ನ ಸಿಕ್ಕಾಪಟ್ಟೆ ಕಾಡಿತ್ತು. ಅಂದಾಜು 40 ವರ್ಷ ಪ್ರಾಯದ ಒಂಟಿ ಸಲಗ ಕೆಲವು ತಿಂಗಳ ಹಿಂದೆ ಇದೇ ಭದ್ರಗೊಳ ಗ್ರಾಮದಲ್ಲಿ ಗೌರಿ ಎಂಬ ಮಹಿಳೆಯನ್ನ ಬಲಿ ಪಡೆದಿತ್ತು. ಅದಾದ ಬಳಿಕ ಎರಡು ದಿನಗಳ ಹಿಂದೆ ಚೆನ್ನಂಗೊಲ್ಲಿ ಗ್ರಾಮದಲ್ಲಿ ಪಾರ್ವತಿ (52) ಎಂಬ ಮಹಿಳೆಯನ್ನ ತುಳಿದು ಸಾಯಿಸಿತ್ತು.
ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ಬಹಳಷ್ಟು ಮಂದಿಯ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸಿತ್ತು. ಹೀಗಾಗಿ ಈ ಆನೆಯನ್ನ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಶಾಸಕ ಎ.ಎಸ್ ಪೊನ್ನಣ್ಣ ಅವರ ಮೂಲಕ ಅರಣ್ಯ ಸಚಿವರಿಗೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾಡಾನೆ ಸೆರೆಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಗೊಳ ಗ್ರಾಮದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯಿತು.
ಸದ್ಯ ಈ ಆನೆಗೆ ʻವೇದʼ ಎಂದು ಹೆಸರಿಡಲಾಗಿದೆ. ಇದು ಮೊನ್ನೆ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ ಬಳಿಕ ಇದೇ ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟ, ದೇವರ ಕಾಡಿನಲ್ಲಿ ಅಡ್ಡಾಡುತ್ತಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಈ ಪುಂಡಾನೆ ಮೇಲೆ ಕಣ್ಣಿಟ್ಟಿದ್ದರು, ಸೆರೆ ಹಿಡಿಯಲು ಅನುಮತಿ ಸಿಕ್ಕ ಕೂಡಲೆ ಕಾರ್ಯಾಚರಣೆ ನಡೆಸಿದ್ದಾರೆ. ಸೆರೆ ಹಿಡಿದು ಕ್ರೇನ್ ಮೂಲಕ ಆನೆಯನ್ನು ಲಾರಿಗೆ ಹತ್ತಿಸಿ ಕೊಂಡೊಯ್ಯಲಾಗಿದೆ.